×
Ad

ಉತ್ತರಪ್ರದೇಶ ಪೊಲೀಸರಿಂದ 6 ತಿಂಗಳಲ್ಲಿ 420 ಎನ್‌ಕೌಂಟರ್

Update: 2017-09-16 22:02 IST

ಲಕ್ನೊ, ಸೆ. 16: ಯೋಗಿ ಆದಿತ್ಯನಾಥ್ ಅವರ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆರು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಉತ್ತರಪ್ರದೇಶ ಪೊಲೀಸರು 420 ಎನ್‌ಕೌಂಟರ್ ನಡೆಸಿದ್ದು, 15 ಮಂದಿಯನ್ನು ಹತ್ಯೆಗೈದಿದ್ದಾರೆ ಎಂದು ಶುಕ್ರವಾರ ಬಿಡುಗಡೆಗೊಂಡ ಅಧೀಕೃತ ದತ್ತಾಂಶ ತಿಳಿಸಿದೆ.

ಪೊಲೀಸ್ ಮಹಾ ನಿರ್ದೇಶಕರ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಬಿಡುಗಡೆಗೊಳಿಸಲಾದ ದತ್ತಾಂಶದಲ್ಲಿ ಈ ಎನ್‌ಕೌಂಟರ್‌ಗಳಲ್ಲಿ ಒಂದಾದ ಚಿತ್ರಕೂಟದಲ್ಲಿ ದರೋಡೆಕೋರರ ಗ್ಯಾಂಗ್ ವಿರುದ್ಧ ನಡೆಸಲಾದ ಎನ್‌ಕೌಂಟರ್‌ನಲ್ಲಿ ಸಬ್ ಇನ್ಸ್ಪೆಕ್ಟರ್ ಜೈಪ್ರಕಾಶ್ ಸಿಂಗ್ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

ದತ್ತಾಂಶದ ಪ್ರಕಾರ ಮಾರ್ಚ್ 20 ಹಾಗೂ ಸೆಪ್ಟಂಬರ್ 14ರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ 88 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಸೆಪ್ಟಂಬರ್ 12ರಿಂದ 14ರ ವರೆಗೆ 48 ಗಂಟೆಗಳಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 10 ಕ್ರಿಮಿನಲ್‌ಗಳು ಹತರಾಗಿದ್ದಾರೆ ಎಂದು ದತ್ತಾಂಶ ಹೇಳಿದೆ.

ಐಜಿ (ಕಾನೂನು ಹಾಗೂ ಸುವ್ಯವಸ್ಥೆ) ಹರಿ ರಾಮ್ ಶರ್ಮಾ, ಈ ಎನ್‌ಕೌಂಟರ್‌ಗಳು ಅಪರಾಧ ನಿಯಂತ್ರಿಸುವ ಪೊಲೀಸರ ಕ್ರಮದ ಒಂದು ಭಾಗ ಎಂದು ಹೇಳಿದ್ದಾರೆ. ಆದರೆ, ಈ ಎನ್‌ಕೌಂಟರ್ ಬಗ್ಗೆ ಡಿಜಿಪಿ ಕೇಂದ್ರ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಹುಲ್ ಶ್ರೀವಾತ್ಸವ ಪೋಸ್ಟ್ ಮಾಡಿದ ಸರಣಿ ಟ್ವೀಟ್‌ಗಳ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿದೆ.

"ಲಕ್ನೊದ ಹೊರವಲಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರಿಗೆ ಬೇಕಾಗಿದ್ದ ಕ್ರಿಮಿನಲ್ ಸುನಿಲ್ ಶರ್ಮಾ ಗಂಭೀರ ಗಾಯಗೊಂಡು ಹತನಾದ ದಿನದ ಬಳಿಕ ಸೆಪ್ಟಂಬರ್ 2ರಂದು ಯುಪಿ ಪೊಲೀಸರ ಎನ್‌ಕೌಂಟರ್ ಎಕ್ಸ್‌ಪ್ರೆಸ್ ರಾಜಧಾನಿಯಲ್ಲಿ ನಿಂತಿದೆ. ಮೈಲುಗಳಷ್ಟು ಹೋಗಬೇಕಿದೆ" ಎಂದು ಎನ್‌ಕೌಂಟರ್‌ನ ಸುದ್ದಿಯೊಂದಿಗೆ ಟ್ವೀಟ್ ಮಾಡಲಾಗಿತ್ತು.

"ಶಾಮ್ಲಿಯಲ್ಲಿ ಕ್ರಿಮಿನಲ್ ರಾಜು ಗುಂಡೇಟಿನಿಂದ ಗಾಯಗೊಂಡು ಹತನಾದಾಗ ಹಾಗೂ ಮುಝಾಪ್ಫರನಗರ್‌ನಲ್ಲಿ ಇನ್ನೋರ್ವ ಕ್ರಿಮಿನಲ್ ಗಾಯಗೊಂಡ ಬಳಿಕ ಸೆಪ್ಟಂಬರ್ 12ರಂದು ಶ್ರೀವಾತ್ಸವ, ಇದು ಅಂತಿಮ ಸಂಖ್ಯೆಯಲ್ಲಿ. ಈಗ 5 ಮಾತ್ರ" ಎಂದು ಟ್ವೀಟ್ ಮಾಡಿದ್ದರು.

ಈ ಬಗ್ಗೆ ಶ್ರೀವಾತ್ಸವ ಅವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಹಾಗೂ ಡಿಜಿಪಿ ಕಚೇರಿಯ ವಕ್ತಾರ ಐಜಿ ಶರ್ಮಾ ಅವರನ್ನು ಪ್ರಶ್ನಿಸುವಂತೆ ತಿಳಿಸಿದ್ದಾರೆ.

   ಈ ಎನ್‌ಕೌಂಟರ್‌ಗಳಲ್ಲಿ ಪೊಲೀಸರು 1,106 ಕ್ರಿಮಿನಲ್‌ಗಳನ್ನು ಬಂಧಿಸಿದ್ದಾರೆ. ಇವರಲ್ಲಿ 84 ಕ್ರಿಮಿನಲ್‌ಗಳು ಗಾಯಗೊಂಡಿದ್ದರು. 54 ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. 69 ಪಾತಕಿಗಳ ಸೊತ್ತನ್ನು ಉತ್ತರಪ್ರದೇಶ ಪಾತಕಿ ಹಾಗೂ ಸಮಾಜ ವಿರೋಧಿ ತಡೆ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News