ವಿಯೆಟ್ನಾಂಗೆ ಅಪ್ಪಳಿಸಿದ ಚಂಡಮಾರುತ ‘ಡೊಕ್ಸುರಿ’: ಕನಿಷ್ಠ 4 ಸಾವು; ಭಾರೀ ನಾಶ-ನಷ್ಟ

Update: 2017-09-16 16:49 GMT

ವಿಯೆಟ್ನಾಂಗೆ ಅಪ್ಪಳಿಸಿದ ಹಾ ಟಿನ್ (ವಿಯೆಟ್ನಾಮ್), ಸೆ. 16: ವಿಯೆಟ್ನಾಮ್ ಕರಾವಳಿಗೆ ಶುಕ್ರವಾರ ಅಪ್ಪಳಿಸಿರುವ ಚಂಡಮಾರುತ ಅನಾಹುತಗಳ ಸರಮಾಲೆಯನ್ನೇ ಸೃಷ್ಟಿಸಿದೆ. ಕನಿಷ್ಠ ನಾಲ್ಕು ಮಂದಿ ಪ್ರಕೃತಿಯ ಪ್ರಕೋಪಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಎಂಟು ಮಂದಿ ಗಾಯಗೊಂಡಿದ್ದಾರೆ.

‘ಡೊಕ್ಸುರಿ’ ಚಂಡಮಾರುತ ತನ್ನ ಹಾದಿಯಲ್ಲಿ ಎದುರಾದ ಎಲ್ಲವನ್ನೂ ನೆಲಸಮಗೊಳಿಸಿದೆ. ಕಟ್ಟಡಗಳು ಧರಾಶಾಯಿಯಾಗಿವೆ ಹಾಗೂ ಹಲವು ರಾಜ್ಯಗಳಲ್ಲಿ ವಿದ್ಯುತ್ ಮತ್ತು ದೂರಸಂಪರ್ಕಗಳ ಮೂಲವ್ಯವಸ್ಥೆಯೇ ಪತನಗೊಂಡಿದೆ.

ಶನಿವಾರ ಬೆಳಗ್ಗೆ ಎದ್ದ ಜನರಿಗೆ ನಾಶ ಮತ್ತು ನಷ್ಟಗಳ ಅಗಾಧ ಪ್ರಮಾಣವನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

‘‘ನಾನು ನನ್ನ ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡು ಮನೆಯ ಒಳಗೆ ಕೂತಿದ್ದೆ. ನಾನು ಎಷ್ಟೊಂದು ಹೆದರಿದ್ದೆ ಎಂದರೆ ಮನೆಯಿಂದ ಹೊರಗೆ ಹೋಗುವ ಸಾಹಸವನ್ನೇ ಮಾಡಲಿಲ್ಲ’’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು. ಹಾ ಟಿನ್ ರಾಜ್ಯದಲ್ಲಿರುವ ಅವರ ರೆಸ್ಟೋರೆಂಟೊಂದು ಸಂಪೂರ್ಣ ನಾಶಗೊಂಡಿದೆ.

ಹೆಚ್ಚಿನ ಸಂಕಷ್ಟಕ್ಕೊಳಗಾದ ಐದು ರಾಜ್ಯಗಳಲ್ಲಿ ಸುಮಾರು 1.23 ಲಕ್ಷ ಮನೆಗಳು ಹಾನಿಗೀಡಾಗಿವೆ ಹಾಗೂ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿದ್ದು ತೆರವು ಕಾರ್ಯಾಚರಣೆ ಬಿರುಸಿನಿಂದ ಸಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News