×
Ad

ಮುಂದಿನ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ಮನವಿ: ಹರೀಶ್ ಕುಮಾರ್

Update: 2017-09-16 22:23 IST

ಮಂಗಳೂರು, ಸೆ.16: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ಮತ (ಇವಿಎಂ)ಯಂತ್ರದ ಬದಲು ಹಳೆಯ ಮಾದರಿಯಲ್ಲೇ ಬ್ಯಾಲೆಟ್ ಪೇಪರನ್ನೇ ಬಳಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ನಾನಾಕಡೆ ನಡೆದ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ಚುನಾವಣಾ ಅಕ್ರಮ ನಡೆದಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿವೆ. ಕೆಲ ತಂತ್ರಜ್ಞರು ಕೂಡ ಇಂತಹ ಅಕ್ರಮ ನಡೆಯುವ ಸಾಧ್ಯತೆ ಇರುವುದಾಗಿ ಹೇಳಿದ್ದಾರೆ. ಸಾರ್ವಜನಿಕರಲ್ಲಿ ಇರುವ ಸಂದೇಹ ಬಗೆಹರಿಸುವ ತನಕ ಹಳೆಯ ಪದ್ಧತಿಯಲ್ಲೇ ಬ್ಯಾಲೆಟ್ ಮಾದರಿ ಪೇಪರ್ ಪ್ರಕ್ರಿಯೆ ನಡೆಸುವುದು ಸೂಕ್ತ ಎಂದರು.

ಪಕ್ಷ ಸಂಘಟನೆಗೆಗೆ ಮನೆಮನೆಗೆ ಕಾಂಗ್ರೆಸ್ ಅಭಿಯಾನ: ಹರೀಶ್ ಕುಮಾರ್

ಮನೆಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ಸೆ.23 ರಂದು ರಾಜ್ಯಾದ್ಯಂತ ಚಾಲನೆ ದೊರೆಯಲಿದ್ದು, ಅದೇ ದಿನ ಬೆಳಗ್ಗೆ 9.30 ಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತೊಂದರಲ್ಲಿ ಜಿಲ್ಲಾ ಮಟ್ಟದ ಉದ್ಘಾಟನೆ ನಡೆಯಲಿದೆ ಅವರು ಹೇಳಿದರು.

7 ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಬರುವ ಸಾಧ್ಯತೆಯಿದ್ದು, ಪಕ್ಷ ಸಂಘಟನೆ ನಿಟ್ಟಿನಲ್ಲಿ ಮನೆಮನೆ ಅಭಿಯಾನ ನಡೆಸಿ ರಾಜ್ಯ ಸರಕಾರದ ಸಾಧನೆ, ಅಭಿವೃದ್ಧಿ ಕೆಲಸಗಳನ್ನು ತಿಳಿಸಲಾಗುವುದು ಎಂದರು.

ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳು ಪಕ್ಷದ ಮುಖಂಡರು ಭಾಗವಹಿಸುವರು. ಸೆ.22 ರಂದು ಬೆಳಗ್ಗೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಯಲಿದ್ದು, ಜಿಲ್ಲಾ ಪಂಚಾಯಿತಿ, ತಾ.ಪಂ. ಅಧ್ಯಕ್ಷರು, ಮುನಿಸಿಪಾಲಿಟಿ ಅಧ್ಯಕ್ಷರು ಸೇರಿದಂತೆ ಪಕ್ಷದ ಘಟಕದ ಮುಂಚೂಣಿ ನಾಯಕರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಬಳಿಕ ಉಳ್ಳಾಲ ವಿಧಾನಸಭಾ ಕ್ಷೇತ್ರ ಸದಸ್ಯರು, ಸೆ.23ರಂದು ಬೆಳಗ್ಗೆ ಸುರತ್ಕಲ್ ವಿಧಾನಸಭಾ, ಮಧ್ಯಾಹ್ನ ಬಂಟ್ವಾಳ, ಸೆ.24ರಂದು ಬೆಳಗ್ಗೆ ಬೆಳ್ತಂಗಡಿ, ಮಧ್ಯಾಹ್ನ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದರು.

ವಾರದೊಳಗೆ ಜಿಲ್ಲಾ ಸಮಿತಿ ರಚನೆ ನಡೆಯಲಿದೆ. ಈಗಾಗಲೇ ಜಿಲ್ಲೆಯಲ್ಲಿ ಬೂತ್ ಸಮಿತಿಗಳನ್ನು ರಚಿಸಲಾಗಿದ್ದು, ಬಿಎಲ್‌ಎ ಪ್ರಕ್ರಿಯೆ ನಡೆಯುತ್ತಿದೆ. 1766 ಬೂತ್ ಪೈಕಿ 1722 ಬೂತ್ ಕಮಿಟಿ ರಚಿಸಲಾಗಿದೆ. ಪ್ರತಿ ಬ್ಲಾಕ್‌ಗೆ 6 ಜಿಲ್ಲಾ ಕಾಂಗ್ರೆಸ್ ಸದಸ್ಯರಿದ್ದು, 16 ಬ್ಲಾಕ್‌ನಲ್ಲಿ 96ಸದಸ್ಯರಿದ್ದಾರೆ. 15ಮಂದಿ ಕೆಪಿಸಿ ಸದಸ್ಯರ ನೇಮಕಾತಿ ನಡೆದಿದೆ ಎಂದರು.

ಸೆ.23 ರಂದು ಬೆಳಗ್ಗೆ ಸುರತ್ಕಲ್, ಮಧ್ಯಾಹ್ನ, 25 ರಂದು ಬೆಳಗ್ಗೆ ಬೆಳ್ತಂಗಡಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಉಳಿದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸಭೆಗಳು ಮುಗಿದಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸಂತೋಷ್ ಕೆ.ಶೆಟ್ಟಿ, ಧನಂಜಯ ಮಟ್ಟು, ಜೆ.ಅಬ್ದುಲ್‌ಸಲೀಂ, ವೆಲೇರಿಯನ್‌ಡಿಸೋಜ, ಮಹಮ್ಮದ್ ಬಡಗನ್ನೂರು, ಸುರೇಂದ್ರ ಕಾಂಬ್ಳಿ, ಮೈಲಪ್ಪ ಸಾಲಿಯಾನ್, ದಿವಾಕರ ಗೌಡ, ಜಯಪ್ರಕಾಶ್ ರೈ, ಮೋಹನ್ ಶೆಟ್ಟಿ, ನಝೀರ್‌ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News