ಲಂಡನ್ ರೈಲು ಸ್ಫೋಟ: ಓರ್ವನ ಬಂಧನ

Update: 2017-09-16 17:31 GMT

ಲಂಡನ್, ಸೆ. 16: ಲಂಡನ್‌ನ ಟ್ಯೂಬ್ ರೈಲು ಜಾಲದ ಮೇಲೆ ಶುಕ್ರವಾರ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಲಂಡನ್ ಪೊಲೀಸರು ಶನಿವಾರ ಬೆಳಗ್ಗೆ 18 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಭೂಗತ ರೈಲೊಂದರಲ್ಲಿ ನಡೆದ ಸ್ಫೋಟದಲ್ಲಿ 30 ಮಂದಿ ಗಾಯಗೊಂಡಿದ್ದಾರೆ.

ಸ್ಫೋಟಕವು ಸರಿಯಾಗಿ ಸ್ಫೋಟಿಸಿದ್ದರೆ ಸಾವು-ನೋವುಗಳ ಸಂಖ್ಯೆ ಅಧಿಕವಾಗಿರುತ್ತಿತ್ತು ಎಂದು ವಿಶ್ಲೇಷಕರು ಹೇಳಿದ್ದಾರೆ.

ದಾಳಿಯಲ್ಲಿ ಬಳಸಲಾದ ಸುಧಾರಿತ ಸ್ಫೋಟಕ ಸಾಧನವು ಉದ್ದೇಶಿತ ರೀತಿಯಲ್ಲಿ ಸ್ಫೋಟಿಸಿಲ್ಲ ಎಂದು ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಟ್ಟಿದ್ದಾರೆ. ಅದು ಆಂಶಿಕವಾಗಿ ಸ್ಫೋಟಿಸಿ ಬೆಂಕಿಯ ಜ್ವಾಲೆಯನ್ನು ಹೊಮ್ಮಿಸಿತು. ಆದರೆ, ಅದು ಶಕ್ತಿಶಾಲಿ ಸ್ಫೋಟವಾಗಲಿಲ್ಲ. ಅದು ಶಕ್ತಿಶಾಲಿ ಸ್ಫೋಟಕವೇ ಆಗಿತ್ತು ಎಂದು ಆರಂಭಿಕ ತನಿಖೆಗಳು ಹೇಳಿವೆ.

ಭಯೋತ್ಪಾದನೆ ಕಾಯ್ದೆಯ 41ಎ ವಿಧಿಯನ್ವಯ ಓರ್ವ ವ್ಯಕ್ತಿಯನ್ನು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

ಬೆದರಿಕೆ ಮಟ್ಟ ಏರಿಕೆ

ಬ್ರಿಟನ್‌ನ ಭಯೋತ್ಪಾದನೆ ಬೆದರಿಕೆ ಮಟ್ಟವನ್ನು ಶುಕ್ರವಾರ ಸಂಜೆ ‘ಗಂಭೀರ’ ಮಟ್ಟಕ್ಕೆ ಏರಿಸಲಾಗಿದೆ.

ಪ್ರಧಾನಿ ತೆರೇಸಾ ಮೇ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯೊಂದರಲ್ಲಿ ಪರಿಸ್ಥಿತಿಯ ಅಂದಾಜು ನಡೆಸಿದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಇದಕ್ಕೂ ಮೊದಲು ಮೇ 22ರಂದು ಮ್ಯಾಂಚೆಸ್ಟರ್ ಅರೀನಾದಲ್ಲಿ ನಡೆದ ಸ್ಫೋಟದ ಬಳಿಕ ಭಯೋತ್ಪಾದನೆ ಬೆದರಿಕೆ ಮಟ್ಟವನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಲಾಗಿತ್ತು. ಬೆದರಿಕೆ ಮಟ್ಟವನ್ನು ‘ಗಂಭೀರ’ ಮಟ್ಟಕ್ಕೆ ಏರಿಸಿದರೆ ಸೂಕ್ಷ್ಮ ಸ್ಥಳಗಳು ಮತ್ತು ಕಟ್ಟಡಗಳಲ್ಲಿ ಸೇನೆಯನ್ನು ನಿಯೋಜಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News