ಎಡಿಬಿ ನೆರವಿನ 2ನೆ ಹಂತದ ‘ಜಲಸಿರಿ’ ಯೋಜನೆ ಚರ್ಚೆ: ಸಾಮಾನ್ಯ ಸಭೆಗೆ ಮನಪಾ ವಿಶೇಷ ಸಭೆಯಲ್ಲಿ ನಿರ್ಣಯ
ಮಂಗಳೂರು, ಸೆ.16: ಎಡಿಬಿ ನೆರವಿನ 2ನೆ ಹಂತದ ಜಲಸಿರಿ ಯೋಜನೆಯಡಿ ವಾರ ಪೂರ್ತಿ ದಿನದ 24 ಗಂಟೆಯೂ (24x7) ನೀರು ಪೂರೈಕೆ ಕಾಮಗಾರಿಯ ಯೋಜನಾ ವರದಿಗೆ ಮಂಗಳೂರು ಮಹಾನಗರ ಪಾಲಿಕೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆಯೊಂದಿಗೆ ಅನುಮೋದನೆಗೆ ನಿರ್ಣಯಿಸಲಾಯಿತು.
ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಇಂದು ಯೋಜನಾ ವರದಿಗೆ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಆಯೋಜಿಸಲಾದ ವಿಶೇಷ ಸಭೆಯಲ್ಲಿ ಸದಸ್ಯರ ಆಕ್ಷೇಪ, ಸಲಹೆ, ಸೂಚನೆಗಳ ಹಿನ್ನೆೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಎಡಿಬಿ ನೆರವಿನ ಕ್ವಿಮಿಪ್ - ಟ್ರಾಂಚ್- 2 ‘ಜಲಸಿರಿ’ ಯೋಜನೆಯಡಿ ಎರಡನೆ ಹಂತದ 24x7 ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಮುಂದಿನ 30 ವರ್ಷಗಳ (2046ರವರೆಗೆ) ಬೇಡಿಕೆಗೆ ಅನುಸಾರವಾಗಿ ಉನ್ನತೀಕರಣಗೊಳಿಸಲು ಕೋಲ್ಕತ್ತಾದ ಜಿಕೆಡಬ್ಲೂ ಕನ್ಸಲ್ಟೆಂಟ್ ಸಂಸ್ಥೆಯು ಯೋಜನಾ ವರದಿ ಸಿದ್ಧಪಡಿಸಿದೆ. 162.60 ಕೋಟಿ ರೂ.ಗಳ ಯೋಜನಾ ವರದಿಯ ಪ್ರಕಾರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳಿಗೆ ಪ್ರತ್ಯೇಕ ಕೊಳವೆ, ಪಂಪ್ ಅಳವಡಿಕೆ, ತುಂಬೆಯಲ್ಲಿ ನೀರು ಪೂರೈಕೆಗೆ ಒತ್ತು, ಪೂರೈಕೆ ಮಾರ್ಗದಲ್ಲಿ ನೀರು ಸೋರುವಿಕೆಗೆ ತಡೆ, ಎಲ್ಲ 60 ವಾರ್ಡ್‌ಗಳಿಗೆ ನೀರು ಪೂರೈಕೆಗೆ ಪ್ರತ್ಯೇಕ ವಿಂಗಡಣೆಯ ಕಾಮಗಾರಿಗಳನ್ನು ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಸಭೆಯಲ್ಲಿ ಸದಸ್ಯರಿಂದ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ನವೆಂಬರ್ ತಿಂಗಳ ಸಾಮಾನ್ಯ ಸಭೆಯಲ್ಲಿ ವರದಿಯನ್ನು ಮಂಡಿಸಿ ಚರ್ಚೆಯ ಬಳಿಕ ಅನುಮೋದನೆ ಮಾಡುವುದಾಗಿ ಮೇಯರ್ ಕವಿತಾ ಸನಿಲ್ ತಿಳಿಸಿದರು.
1956ರಲ್ಲಿ ತುಂಬೆಯಲ್ಲಿ ನಿರ್ಮಿಸಿದ 2.25 ಎಂಎಲ್‌ಡಿ ಸಾಮರ್ಥ್ಯದ ಜಾಕ್‌ವೆಲ್‌ನ್ನು 20ಎಂಎಲ್‌ಡಿಗೆ ಮೇಲ್ದರ್ಜೆಗೇರಿಸಲಾಗುವುದು. ಇದಕ್ಕೆ ಬೇಕಾದ ಪಂಪ್‌ಸೆಟ್, ಪ್ಯಾನಲ್, ಟ್ರಾನ್ಸ್‌ಫಾರ್ಮಾರ್ ಮತಿತಿತರ ಉಪಕರಣಗಳ ಬದಲಾವಣೆ, ಈ ಜಾಕ್‌ವೆಲ್‌ನಿಂದ ರಾಮಲ್‌ಕಟ್ಟೆಯಲ್ಲಿರುವ 2.25 ಎಂಎಲ್‌ಡಿ ಸೆಟ್ಲಿಂಗ್ ಟ್ಯಾಂಕ್‌ಗೆ ಅಂದರೆ ಪ್ರಸ್ತಾವಿತ 20 ಎಂಎಲ್‌ಡಿ ನೀರು ಶುದ್ಧೀಕರಣ ಘಟಕದವರೆಗೆ 610 ಮಿ.ಮೀ. ವ್ಯಾಸದ 1075 ಮೀ.ಉದ್ದದ ಎಂ.ಎಸ್.ಕೊಳವೆಯನ್ನು ಅಳವಡಿಸಿ ಕಚ್ಚಾ ನೀರನ್ನು ಪಂಪ್ ಮಾಡಲಾಗುವುದು. ಇದೇ ಘಟಕದಿಂದ ಸಂತ್ರಸ್ತರ ಹಳ್ಳಿಗಳಿಗೆ 10 ಎಂಎಲ್‌ಡಿ ಶುದ್ದ ನೀರನ್ನು ಪೂರೈಸಲಾಗುವುದು. ರಾಮಲ್‌ಕಟ್ಟೆಯಲ್ಲಿ ನಿರ್ಮಿಸುವ 80 ಎಂಎಲ್‌ಡಿ ನೀರು ಶುದ್ಧೀಕರಣ ಘಟಕದ ಶುದ್ಧ ನೀರಿನ ಸಂಪ್‌ಗೆ ನೆಲಮಟ್ಟದ ಜಲಸಂಗ್ರಹಾಗಾರಕ್ಕೆ ಹೆಚ್ಚುವರಿ 10ಎಂಎಲ್‌ಡಿ ಡಂಪಿಂಗ್ ಮಾಡಲು 800 ಮಿ.ಮೀ. ವ್ಯಾಸದ ಕೊಳವೆ ಮಾರ್ಗ ರಚಿಸಲಾಗುವುದು. 1971ರಲ್ಲಿ ತುಂಬೆಯಲ್ಲಿ ನಿರ್ಮಿಸಲಾದ 18 ಎಂಜಿಡಿ ಜಾಕ್‌ವೆಲ್‌ನಲ್ಲಿ 3 ಪಂಪ್‌ಸೆಟ್‌ಗಳು, ಪ್ಯಾನಲ್, ಟ್ರಾನ್ಸ್‌ಫಾರ್ಮಾರ್‌ಗಳನ್ನು ಬದಲಾವಣೆ ಮಾಡಲಾಗುವುದು. 1971ರಲ್ಲಿ ರಾಮಲ್‌ಕಟ್ಟೆಯಲ್ಲಿ ನಿರ್ಮಿಸಿದ 18 ಎಂಜಿಡಿ ನೀರು ಶುದ್ಧೀಕರಣ ಘಟಕವನ್ನು ಪುನಶ್ಚೇತನಗೊಳಿಸಲಾಗುವುದು. ಪಡೀಲು, ಬೆಂದೂರ್, ಮೇರಿಹಿಲ್, ಲೇಡಿಹಿಲ್, ಬೊಂದೇಲ್, ಶಕಿತಿನಗರ ಮತುತಿ ಬಾಳದಲ್ಲಿ ಪಂಪ್‌ಹೌಸ್ ನಿರ್ಮಾಣ, 14 ಸ್ಥಳಗಳಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು.
ಹಳೆಯ ಪೈಪ್‌ಕೊಳವೆಗಳನ್ನು ಸುಮಾರು 32.57 ಕಿ.ಮೀ.ನಷ್ಟು ಬದಲಾವಣೆ ಮಾಡಲಾಗುವುದು. ಹೊಸ ಓವರ್‌ಹೆಡ್ ಟ್ಯಾಂಕ್‌ಗಳಿಗೆ ಸುಮಾರು 38.15 ಕಿ.ಮೀ.ನಷ್ಟು ಪಂಪಿಂಗ್ ಕೊಳವೆ ಅಳವಡಿಕೆ, ಎಲ್ಲ ಪಂಪ್‌ಹೌಸ್‌ನಿಂದ ಹೊರಹರಿವು ಮತ್ತು ಓವರ್‌ಹೆಡ್ ಟ್ಯಾಂಕ್‌ಗಳಿಗೆ ಒಳ ಹರಿವಿನ ಮಾಪನಕ್ಕಾಗಿ 169 ಕಡೆಗಳಲ್ಲಿ ಬಲ್ಕ್ ವಾಟರ್ ಮೀಟರ್ ಅಳವಡಿಸಬೇಕಿದೆ ಎಂದು ಕನ್ಸಲ್ಟೆಂಟ್‌ನ ತಾಂತ್ರಿಕ ಅಧಿಕಾರಿ ಜುಪ್ರಕಾಶ್ ಸಭೆಗೆ ವಿವರ ನೀಡಿದರು.
ಪ್ರಥಮ ಹಂತದ ಎಡಿಬಿ ಯೋಜನೆಯ ಅಪೂರ್ಣವಾಗಿದ್ದು, ಕಾಮಗಾರಿಯಲ್ಲಿ ಲೋಪ ಕಂಡುಬಂದಿದೆ. ಅದನ್ನು ಸರಿಪಡಿಸದೆ 2ನೇ ಹಂತದ ಕಾಮಗಾರಿ ನಡೆಸಬಾರದು. ಒಂದು ವೇಳೆ ನಡೆಸುವುದಿದ್ದರೆ, ಮೊದಲ ಹಂತದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಪೂರೈಸಬೇಕು ಎಂದು ವಿಪಕ್ಷ ಸದಸ್ಯ ಪ್ರೇಮಾನಂದ ಶೆಟ್ಟಿ ಆಗ್ರಹಿಸಿದರು.
ನೀರಿನ ಮೂಲವನ್ನೇ ಸ್ಪಷ್ಟಪಡಿಸಿದೆ ಯೋಜನೆಯ ಬಗ್ಗೆ ಮಾತನಾಡುವುದು ನಿರರ್ಥಕ. ಈ ಬಗ್ಗೆ ಸಮಗ್ರವಾಗಿ ವಾರ್ಡ್ ಮಟ್ಟದ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ರೂಪಾ ಡಿ. ಬಂಗೇರ ಆಕ್ಷೇಪಿಸಿದರು.
ಯೋಜನಾ ವರದಿ ಪ್ರಕಾರ ಮೊದಲ ಹಂತದಲ್ಲಿ ಹಾಲಿ ನೀರು ಪೂರೈಕೆ ಯೋಜನೆಯನ್ನು ಅಭಿವೃದ್ಧಿಪಡಿಸುವುದು. 2ನೇ ಹಂತದಲ್ಲಿ 24 ಗಂಟೆ ನೀರು ಪೂರೈಕೆಯನ್ನು ಬಲಗೊಳಿಸುವುದು. 3ನೇ ಹಂತದಲ್ಲಿ ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳುವುದು ಎಂದು ತಿಳಿಸಲಾಗಿದೆ. ಆದರೆ ಯೋಜನೆಯನ್ನು ಅನುಷ್ಠಾನಿಸಿದ ಬಳಿಕ ಕೊನೆಯಲ್ಲಿ ಭೂಸ್ವಾಧೀನ ಪಡಿಸುವುದು ಹೇಗಾಗುತ್ತದೆ ಎಂದು ಸದಸ್ಯ ವಿಜಯ ಕುಮಾರ್ ಶೆಟ್ಟಿ ಪ್ರಶ್ನಿಸಿದರು.
ಈ ಯೋಜನೆಯ ಕುರಿತು ಸದಸ್ಯರಾದ ಶಶಿಧರ ಹೆಗ್ಡೆ, ಮುಹಮ್ಮದ್, ರಾಧಾಕೃಷ್ಣ, ಎ.ಸಿ.ವಿನಯರಾಜ್, ದಯಾನಂದ ಶೆಟ್ಟಿ, ದೀಪಕ್ ಪೂಜಾರಿ ಮೊದಲಾವದರು ಮಾತನಾಡಿದರು.
ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್, ಪ್ರತಿಭಾ ಕುಳಾಯಿ, ಆಯುಕ್ತರಾದ ಮುಹ್ಮುದ್ ನಝೀರ್ ಉಪಸ್ಥಿತರಿದ್ದರು.