×
Ad

ಕಲೆಗಳಿಂದ ಮಾತ್ರ ಭಾರತೀಯರಾಗಿ ಉಳಿಯಲು ಸಾಧ್ಯ: ಡಾ.ಕಂಬಾರ

Update: 2017-09-16 22:30 IST

ಉಡುಪಿ, ಸೆ.16: ರಸಾನುಭಾವ ಎಂಬುದು ಭಕ್ತಿ ರಸವೇ ಆಗಿದೆ. ಇದು ಸಾಹಿತ್ಯ ಮತ್ತು ಕಲೆಗಳಿಂದ ಮಾತ್ರ ಸಿಗಲು ಸಾಧ್ಯ. ಪಾಶ್ಚಿಮಾತ್ಯ ಸಂಸ್ಕೃತಿಯ ಮಧ್ಯೆಯೂ ಕಲೆ ನಮ್ಮ ವಿವೇಕವನ್ನು ಬೆಳೆಸುತ್ತದೆ. ಇದರಿಂದ ಮಾತ್ರ ನಾವು ಭಾರತೀಯರಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪೇಜಾವರ ಮಠದ ವತಿಯಿಂದ ಶ್ರೀಕೃಷ್ಣಾಜನ್ಮಾಷ್ಟಮಿಯ ಪ್ರಯುಕ್ತ ಶನಿವಾರ ರಾಜಾಂಗಣದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಕ್ತಿಯ ಕುರಿತು ಅವರು ಮಾತನಾಡುತ್ತಿದ್ದರು.

ಭಕ್ತಿ ಮತ್ತು ಶಿಕ್ಷಣ ಚಳವಳಿಗಳು ಭಾರತದ ಇತಿಹಾಸದಲ್ಲಿ ಬಹುದೊಡ್ಡ ಚಳವಳಿಗಳಾಗಿವೆ. ಭಕ್ತಿ ಚಳವಳಿಯಿಂದ ದೇಶದಲ್ಲಿ ನಾಟಕ, ಯಕ್ಷಗಾನ ಕಲೆಗಳು ದೇಶಾದ್ಯಂತ ಪ್ರಚಾರ ಪಡೆದುಕೊಂಡವು. ಅಲ್ಲದೆ ಸಾಕಷ್ಟು ಹೊಸ ಹೊಸ ಕಲೆಗಳು ಸೃಷ್ಠಿಯಾದವು. ವಿವಿಧ ಬಯಲಾಟ ಪ್ರಕಾರಗಳು ಹುಟ್ಟಿ ಕೊಂಡವು. ಈ ಮೂಲಕ ಒಂದು ಕಾಲದಲ್ಲಿ ಭಾರತದ ಭಕ್ತಿ ಚಳವಳಿಯು ಪ್ರಪಂಚ ವ್ಯಾಪಿಯಾಗಿತ್ತು ಎಂದು ಅವರು ತಿಳಿಸಿದರು.

ನಾಟಕದಂತಹ ಕಲೆಯಿಂದಾಗಿ ಕಲಾವಿದರು ಹಾಗೂ ಪ್ರೇಕ್ಷಕರಲ್ಲಿರುವ ಎಲ್ಲ ರೀತಿಯ ಅಹಂಕಾರ, ಘನತೆಗಳು ಮಾಯವಾಗಿ ಕೇವಲ ಮನುಷ್ಯರು ಎಂಬ ಭಾವನೆಗಳು ಮೂಡುತ್ತವೆ. ಅದರ ಜೊತೆ ತಲ್ಲೀನರಾಗಿರುವ ಮೂಲಕ ನಾವು ಹೊಸ ಮನುಷ್ಯರಾಗುತ್ತೇವೆ. ಈ ರೀತಿ ನಮ್ಮಲ್ಲಿ ಬದಲಾವಣೆಗಳನ್ನು ಕಾಣ ಬಹುದಾಗಿದೆ. ಹಾಗಾಗಿ ರಸಾನುಭಾವ ಎಂಬುದು ಅತ್ಯಂತ ಅಮೂಲ್ಯ ವಾದುದು ಎಂದರು.

ಸಂಸ್ಕೃತಿಯನ್ನು ನಾವು ತಾಯಿ ಭಾಷೆಯಾಗಿ ಸ್ವೀಕರಿಸಿ, ಅದರಲ್ಲಿಯೇ ಎಲ್ಲ ತಿಳುವಳಿಕೆಯನ್ನು ಇಟ್ಟುಕೊಂಡೆವು. ಆದರೆ ಬ್ರೀಟಿಷರು ಬಂದು ಸಂಸ್ಕೃತದಲ್ಲಿ ರುವ ತಿಳುವಳಿಕೆ ಎಲ್ಲ ಸುಳ್ಳು ಎಂಬುದಾಗಿ ಬಿಂಬಿಸಿ, ಇಂಗ್ಲಿಷ್‌ನ್ನು ಅಧಿಕೃತ ಭಾಷೆಯನ್ನಾಗಿ ಮಾಡಿದರು. ಇದನ್ನು ನಮ್ಮ ಕವಿಗಳು ನಂಬಿ ಬಿಟ್ಟಿದ್ದರು. ಇದು ಬಹಳ ದೊಡ್ಡ ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.

ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತಿಯ ಕ್ರಾಂತಿಯು ನಮ್ಮ ದೇಶದ ಜನರನ್ನು ಜಾತಿ, ಮತ ಬೇಧವಿಲ್ಲದೆ ಒಗ್ಗೂಡಿಸಿತು. ಭಕ್ತಿ ಎಂಬುದು ಕೇವಲ ಒಂದು ಗುಂಪಿಗೆ ಸೀಮಿತವಾಗಿಲ್ಲ. ಭಾರತೀಯ ಸಂಸ್ಕೃತಿಯನ್ನು ಉಳಿಸುವಲ್ಲಿ ಭಕ್ತಿ ಚಳವಳಿಯ ಬಹಳ ದೊಡ್ಡ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಂಬಾರರಿಗೆ ಪೇಜಾವರ ಸ್ವಾಮೀಜಿ ಶ್ರೀಕೃಷ್ಣಾನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಡಾ.ಗುರುಮೂರ್ತಿ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News