ಸಂಘ ಪರಿವಾರದಿಂದ ಸಂಪ್ಯ ಠಾಣಾ ಎಸ್‌ಐ ಮಾನಸಿಕ ಸ್ಥೈರ್ಯ ಕುಂದಿಸುವ ಕೆಲಸ ನಡೆಯುತ್ತಿದೆ: ಅಶ್ರಫ್ ಕಲ್ಲೇಗ
ಪುತ್ತೂರು, ಸೆ. 16: ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿರುವ ಸಂಪ್ಯ ಠಾಣೆಯ ಎಸ್‌ಐ ಅಬ್ದುಲ್ ಖಾದರ್ ಅವರು ಮುಸ್ಲಿಂ ಸಮುದಾಯದವರು ಎಂಬ ಕಾರಣಕ್ಕಾಗಿ ಅವರ ವಿರುದ್ಧ ಲವ್‌ಜೆಹಾದಿ, ಅಕ್ರಮ ಗೋಸಾಗಾಟಕ್ಕೆ ಮತ್ತು ಇಸ್ಲಾಂ ಮೂಲಭೂತವಾದಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ವಿನಾ ಕಾರಣ ಆರೋಪ ಮಾಡಿ ಅವರ ಮಾನಸಿಕ ಸ್ಥೈರ್ಯವನ್ನು ಕುಂದಿಸುವ ಕೆಲಸವನ್ನು ಸಂಘ ಪರಿವಾರದ ಸಂಘಟನೆಗಳು ಮಾಡುತ್ತಿವೆ ಎಂದು ದ.ಕ. ಮುಸ್ಲಿಂ ಯುವಜನ ಪರಿಷತ್‌ನ ಪುತ್ತೂರು ತಾಲೂಕು ಮಾಜಿ ಅಧ್ಯಕ್ಷ ಅಶ್ರಫ್ ಕಲ್ಲೇಗ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿಷ್ಟಾವಂತ ಅಧಿಕಾರಿಗಳನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವ ವಿಶ್ವ ಹಿಂದೂಪರಿಷತ್, ಜಜರಂಗದಳ ಸೇರಿದಂತೆ ಸಂಘಪರಿವಾರದ ಸಂಘಟನೆಗಳು ಅದಕ್ಕೆ ಬಗ್ಗದ ಕೆಲ ಅಧಿಕಾರಿಗಳ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.
ಸಯನೈಡ್ ಕಿಲ್ಲರ್ ಮೋಹನ ಸೈನೆಡ್ ನೀಡಿ 40 ಮಂದಿ ಮಹಿಳೆಯರನ್ನು ಕೊಲೆ ಮಾಡಿದ್ದಾನೆ. ಆದರೆ ಇದನ್ನು ಸಂಘ ಪರಿವಾರದ ಯಾವ ಸಂಘಟನೆಗಳು ವಿರೋಧಿಸಿ ಮಾತನಾಡಿಲ್ಲ. ಅನೇಕ ಮುಸ್ಲಿಂ ಯುವತಿಯರನ್ನು ಹಿಂದೂ ಯುವಕರು ಮದುವೆಯಾಗಿದ್ದಾರೆ. ಆದರೆ ಯಾರೂ ಇದನ್ನು ‘ಹಿಂದೂ ಲವ್ ಜೆಹಾದಿ’ ಎಂದು ಹೇಳಿಲ್ಲ. ಸಂಘ ಪರಿವಾರದ ಸಂಘಟನೆಗಳು ರೂ. 5 ಲಕ್ಷ ಮತ್ತು ಮನೆ ನಿರ್ಮಸಿಕೊಡುವ ಆಮಿಷ ಒಡ್ಡಿ ಮುಸ್ಲಿಂ ಸಮುದಾಯದ ಯುವತಿಯರನ್ನು ಲವ್ ಬಲೆಗೆ ಹಾಕಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ಪುತ್ತೂರಿನಲ್ಲಿಯೇ ಈ ಕೆಲಸ ನಡೆದಿದೆ ಎಂದು ತಿಳಿಸಿದರು.
ಭಾರತದ ಸುರಕ್ಷತೆಯ ಬಗ್ಗೆ ಜಗದೀಶ್ ಕಾರಂತ ಅವರು ಮಾತನಾಡುತ್ತಿದ್ದಾರೆ. ಆದರೆ ದೇಶದಲ್ಲಿ ಚಿಂತಕರನ್ನು, ಪತ್ರಕರ್ತರನ್ನು ಕೊಲೆ ಮಾಡಲಾಗುತ್ತಿದೆ. ಮದುವೆಯಾಗದೆ ಕಣ್ಣೀರು ಸುರಿಸುತ್ತಿರುವ ಅನೇಕ ಬಡಪಾಯಿ ಹಿಂದೂ ಹೆಣ್ಣು ಮಕ್ಕಳಿದ್ದಾರೆ. ಇವರ ಕಣ್ಣೀರೊರೆಸುವ ಕೆಲಸಗಳನ್ನು ಹಿಂದುತ್ವ ಸಂಘಟನೆಗಳು ಮಾಡುತ್ತಿಲ್ಲ. ಹೀಗಿರುವಾಗ ಜಗದೀಶ್ ಕಾರಂತ ಅವರಿಂದ ಭಾರತದ ಸುರಕ್ಷೆ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ರಾಜ್ಯ ಸರ್ಕಾರಕ್ಕೆ ಧೈರ್ಯ ಹಾಗೂ ತಾಕತ್ತಿದ್ದರೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವನ್ನು ನಿಷೇಧ ಮಾಡಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತಾಕತ್ತನ್ನು ಈ ವಿಚಾರದಲ್ಲಿ ತೋರಿಸಲಿ ಎಂದು ಸವಾಲು ಹಾಕಿದರು.
ಈ ಸಂದರ್ಭ ದ.ಕ.ಮುಸ್ಲಿಂ ಯುವಜನ ಪರಿಷತ್‌ನ ಪುತ್ತೂರು ತಾಲೂಕು ಅಧ್ಯಕ್ಷ ಸೂಫಿ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿ ಪುತ್ತು ಶೇಟ್, ಕೋಶಾಧಿಕಾರಿ ಯುನಿಕ್ ಅಬ್ದುಲ್ ರಹಿಮಾನ್ ಹಾಗೂ ಜೊತೆ ಕಾರ್ಯದರ್ಶಿ ಅಶ್ರಫ್ ಮುಕ್ವೆ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.