ಶೆರ್ಲಿ ತೋಮಸ್ ಬಾಬುರಿಗೆ ಡಾಕ್ಟರೇಟ್ ಪದವಿ
ಮೂಡುಬಿದಿರೆ, ಸೆ. 16: ಮಂಗಳೂರು ವಿ.ವಿ.ಯಲ್ಲಿ ಮಂಡಿಸಿದ ಸಮಾಜಕಾರ್ಯ ಕುರಿತ ಮಹಾ ಪ್ರಬಂಧಕ್ಕೆ ಆಳ್ವಾಸ್ ಸಮಾಜ ಕಾರ್ಯದ ಸ್ನಾತಕೋತ್ತರ ವಿಭಾಗದಲ್ಲಿ ಪ್ರಾಧ್ಯಾಪಕಿ ಶೆರ್ಲಿ ತೋಮಸ್ ಬಾಬು ಅವರಿಗೆ ಡಾಕ್ಟರೇಟ್ ಪದವಿ ದೊರೆತಿದೆ
ಅವರು ‘ಎ ಸ್ಟಡಿ ಒನ್ ಚೈಲ್ಡ್ ಕೇರಿಂಗ್ ಪ್ರಾಕ್ಟಿಸಸ್ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್’ (ದ.ಕ. ಜಿಲ್ಲೆಯಲ್ಲಿನ ಮಕ್ಕಲ ಪಾಲನ ರೀತಿಗಳ ಬಗೆಗಿನ ಒಂದು ಅಧ್ಯಯನ) ಕುರಿತು ಸಮಾಜಕಾರ್ಯ ಮಹಾಪ್ರಬಂಧ ಮಂಡಿಸಿದ್ದರು.
ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಮಂಗಳೂರು ಇದರ ನಿವೃತ್ತ ಪ್ರಾಂಶುಪಾಲೆ ಪ್ರೊ. ಜೆಸಿಂತಾ ಡಿ’ಸೋಜಾ ಇವರ ಮಾರ್ಗದರ್ಶ ನದಲ್ಲಿ ಸಂಶೋಧನೆ ನಡೆಸಿದ್ದು, ಈ ಪ್ರಬಂಧವು ಮಂಗಳೂರು ವಿ.ವಿ.ಯಲ್ಲಿ ಸಮಾಜಕಾರ್ಯ ವಿಭಾಗ ಅಸ್ತಿತ್ವಕ್ಕೆ ಬಂದ ನಂತರದ ಮೊತ್ತ ಮೊದಲ ಪ್ರಬಂಧ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.
ಈ ಸಂಶೋಧನೆಯನ್ನು ಭಾರತದಲ್ಲಿ ಮತ್ತು ದ.ಕ. ಜಿಲ್ಲೆಯಲ್ಲಿ ಕ್ಷೀಣಿಸುತ್ತಿರುವ ಹೆಣ್ಣುಮಕ್ಕಳ ಲಿಂಗ ಪ್ರಮಾಣದ ಹಿನ್ನೆಲೆಯಲ್ಲಿ ನಡೆಸಲಾಗಿದ್ದು, ಆದಾಯ, ಜಾತಿ, ಧರ್ಮ, ಭೌಗೋಳಿಕ ಹಿನ್ನೆಲೆಯನ್ನು ಮೀರಿದ ಕೆಲವು ಸಾಮಾನ್ಯ ಪಾಲನಾಕ್ರಮಗಳು ಪಾಲಕರಲ್ಲಿ ರೂಢಿಯಲ್ಲಿದ್ದು, ಇವು ಗಂಡು-ಹೆಣ್ಣು ಮಕ್ಕಳ ನಡುವಣ ತಾರತಮ್ಯದ ಪಾಲನೆಗೆ ಕಾರಣವಾಗಿವೆ ಎಂಬ ಅಂಶಗಳನ್ನು ಪ್ರತಿಪಾದಿಸಲಾಗಿದ್ದು, ಈ ಮೂಲಕ ಪಾಲಕರಲ್ಲಿರುವ ಹೆಣ್ಣು ಮಗುವಿನ ಬಗೆಗಿನ ವಿಮುಖತೆ ಮತ್ತು ಗಂಡು ಮಗುವಿನ ಬಗೆಗಿನ ಒಲವನ್ನು ಸಂಶೋಧನೆಯು ದೃಢೀಕರಿಸುತ್ತದೆ.
ಇದಕ್ಕಾಗಿ ಹೆಣ್ಣು ಮಗುವಿನ ಜನನವನ್ನು ನಿಯಂತ್ರಿಸಲು ಮತ್ತು ಗಂಡು ಮಗುವನ್ನು ಹೊಂದಲು ವೈದ್ಯಕೀಯ ತಂತ್ರಜ್ಞಾನದ ದುರುಪಯೋಗವಾಗಿರುವ ಸಾಧ್ಯತೆಯ ಬಗೆಗೆ ಶಂಕೆಯನ್ನು ಸಂಶೋಧನೆ ವ್ಯಕ್ತಪಡಿಸುತ್ತದೆ.