×
Ad

ಡೇರಾ ಪದಾಧಿಕಾರಿಯ ಸೆರೆ,ಹನಿಪ್ರೀತ್‌ಗಾಗಿ ಹುಡುಕಾಟ

Update: 2017-09-17 17:20 IST

ಚಂಡೀಗಡ,ಸೆ.17: ಆ.25ರಂದು ಡೇರಾ ಮುಖ್ಯಸ್ಥ ಗುರ್ಮೀತ್ ಸಿಂಗ್‌ನನ್ನು ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಯೆಂದು ವಿಶೇಷ ಸಿಬಿಐ ನ್ಯಾಯಾಲಯವು ಘೋಷಿಸಿದ ಬಳಿಕ ಪಂಚಕುಲಾದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.

 ತಲೆಮರೆಸಿಕೊಂಡಿರುವ ಗುರ್ಮೀತ್‌ನ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಮತ್ತು ಡೇರಾದ ವಕ್ತಾರ ಆದಿತ್ಯ ಇನ್ಸಾನ್ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ವಿದೇಶಗಳಿಗೆ ಪರಾರಿಯಾಗಬಹುದೆಂಬ ಶಂಕೆಯಿಂದ ಪೊಲೀಸರು ಸೆ.1ರಂದು ಈ ಇಬ್ಬರ ವಿರುದ್ಧ ಲುಕ್‌ಔಟ್ ನೋಟಿಸ್‌ಗಳನ್ನು ಹೊರಡಿಸಿದ್ದರು.

ಡೇರಾದ ಪದಾಧಿಕಾರಿ ಪ್ರದೀಪ ಗೋಯಲ್ ಇನ್ಸಾನ್‌ನನ್ನು ರವಿವಾರ ರಾಜಸ್ಥಾನದ ಉದಯಪುರದಲ್ಲಿ ಬಂಧಿಸಲಾಗಿದ್ದರೆ, ಆದಿತ್ಯ ಇನ್ಸಾನ್‌ನ ಭಾವ ಪ್ರಕಾಶ ಅಲಿಯಾಸ್ ವಿಕಿ ಎಂಬಾತ ಪಂಜಾಬಿನ ಮೊಹಾಲಿಯಲ್ಲಿ ಸೆರೆ ಸಿಕ್ಕಿದ್ದಾನೆ. ವಿಜಯ್ ಎಂಬ ಇನ್ನೋರ್ವ ವ್ಯಕ್ತಿಯನ್ನು ಶನಿವಾರ ಪಿಂಜೋರ್‌ನಲ್ಲಿ ಬಂಧಿಸಲಾಗಿತ್ತು ಎಂದು ಪಂಚಕುಲಾ ಡಿಸಿಪಿ ಮನಬೀರ್ ಸಿಂಗ್ ಅವರು ತಿಳಿಸಿದರು. ಹಿಂಸಾಚಾರದ ಘಟನೆಗಳಲ್ಲಿ ಈ ಮೂವರ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ ಎಂದರು.

 ಬೆಂಕಿ ಹಚ್ಚಿದ ಘಟನೆಗಳಿಗೆ ಸಂಬಂಧಿಸಿದಂತೆ ಅಂಬಾಲದಲ್ಲಿ ಇನ್ನೋರ್ವ ವ್ಯಕ್ತಿ ಯನ್ನೂ ಪೊಲೀಸರು ಬಂಧಿಸಿದ್ದಾರೆ.

ಹನಿಪ್ರೀತ್ ಈಗಾಗಲೇ ನೇಪಾಳಕ್ಕೆ ಪರಾರಿಯಾಗಿರುವುದಾಗಿ ಪ್ರದೀಪ ಗೋಯಲ್ ವಿಶೇಷ ತನಿಖಾ ತಂಡಕ್ಕೆ ತಿಳಿಸಿದ್ದಾನೆ ಎಂಬ ಮಾಧ್ಯಮ ವರದಿಗಳ ಕುರಿತ ಸುದ್ದಿಗಾರರ ಪ್ರಶ್ನೆಗೆ ಸಿಂಗ್, ಈ ವರದಿಗಳಲ್ಲಿ ಸತ್ಯಾಂಶವಿಲ್ಲ,ಇವೆಲ್ಲ ಆಧಾರರಹಿತ ವರದಿಗಳಾಗಿವೆ ಎಂದು ಉತ್ತರಿಸಿದರು.

ಡೇರಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಗುರ್ಮೀತ್‌ನ ಆಪ್ತಬಂಟ ಮತ್ತು ವಕ್ತಾರ ದಿಲಾವರ್ ಇನ್ಸಾನ್ ಹಾಗೂ ಡೇರಾದ ರಾಜ್ಯ ಸಮಿತಿಯ ಸದಸ್ಯ ಗೋವಿಂದ ಇನ್ಸಾನ್ ಸೇರಿದಂತೆ ಹಲವಾರು ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಹನಿಪ್ರೀತ್ ಶೋಧಕ್ಕಾಗಿ ಹರ್ಯಾಣ ಪೊಲೀಸರ ವಿಶೇಷ ತಂಡವೊಂದು ಈ ಹಿಂದೆ ನೇಪಾಳದ ಗಡಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ತೆರಳಿತ್ತು. ಅಲ್ಲದೆ ಗಡಿಗೆ ಹೊಂದಿಕೊಂಡಿರುವ ಪೊಲೀಸ್ ಠಾಣೆಗಳಲ್ಲಿ ಆಕೆಯ ಚಿತ್ರ ಗಳನ್ನೂ ಅಂಟಿಸಲಾಗಿತ್ತು.

ಹನಿಪ್ರೀತ್ ಗುರ್ಮೀತ್‌ನನ್ನು ಅಪರಾಧಿಯೆಂದು ನ್ಯಾಯಾಲಯವು ಘೋಷಿಸಿದ ಬಳಿಕ ಆತನ ಪರಾರಿಗಾಗಿ ಸಂಚು ಹೂಡಿದ್ದ ಆರೋಪವನ್ನು ಎದುರಿಸುತ್ತಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News