ಗೋರಖ್‌ಪುರ ದುರಂತ: ಆಮ್ಲಜನಕ ಪೂರೈಕೆದಾರನ ಬಂಧನ

Update: 2017-09-17 12:03 GMT

ಗೋರಖಪುರ(ಉ.ಪ್ರ),ಸೆ.17: ಕಳೆದ ತಿಂಗಳು ಇಲ್ಲಿಯ ಸರಕಾರಿ ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಒಂದೇ ವಾರದೊಳಗೆ 70ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ಲಜನಕ ಪೂರೈಕೆ ಸಂಸ್ಥೆ ಪುಷ್ಪಾ ಸೇಲ್ಸ್‌ನ ಮಾಲಿಕ ಮನೀಷ್ ಭಂಡಾರಿಯನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ. ಪೂರೈಕೆ ಸಂಸ್ಥೆಗೆ ಹಣ ಬಾಕಿಯಿದ್ದರಿಂದ ಆಮ್ಲಜನಕ ಪೂರೈಕೆಯಲ್ಲಿ ಉಂಟಾಗಿದ್ದ ವ್ಯತ್ಯಯ ಮಕ್ಕಳ ಸಾವಿಗೆ ಕಾರಣವೆಂದು ಆರೋಪಿಸಲಾಗಿತ್ತು.

ಆದರೆ ಮಕ್ಕಳ ಸಾವಿಗೆ ಆಮ್ಲಜನಕ ಕೊರತೆ ಕಾರಣವಾಗಿತ್ತು ಎನ್ನುವುದನ್ನು ಉ.ಪ್ರ.ಸರಕಾರವು ಖಂಡತುಂಡವಾಗಿ ನಿರಾಕರಿಸಿತ್ತು.

ಭಂಡಾರಿಯ ಬಂಧನದೊಂದಿಗೆ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದ್ದ ಎಲ್ಲ ಒಂಭತ್ತೂ ಜನರು ಜೈಲು ಸೇರಿದಂತಾಗಿದೆ. ಭಂಡಾರಿ ಸುದೀರ್ಘ ಸಮಯದಿಂದ ತಲೆಮರೆಸಿ ಕೊಂಡಿದ್ದ ಎಂದು ಗೋರಖ್‌ಪುರದ ಎಸ್‌ಎಸ್‌ಪಿ ಅನಿರುದ್ಧ ಸಿದ್ಧಾರ್ಥ ಪಂಕಜ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಬಿಆರ್‌ಡಿ ಮೆಡಿಕಲ್ ಕಾಲೇಜಿನ ಆಗಿನ ಪ್ರಾಂಶುಪಾಲ ಡಾ.ರಾಜೀವ ಮಿಶ್ರಾ, ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ.ಸತೀಶ, 100 ಹಾಸಿಗೆಗಳ ಎಇಎಸ್ ವಾರ್ಡ್‌ನ ಉಸ್ತುವಾರಿ ಡಾ.ಕಫೀಲ್ ಖಾನ್ ಮತ್ತು ಪುಷ್ಪಾ ಸೇಲ್ಸ್ ವಿರುದ್ಧ ಕ್ರಿಮಿನಲ್ ಕ್ರಮಗಳನ್ನು ಜರುಗಿಸುವಂತೆ ಈ ದುರಂತದ ಬಗ್ಗೆ ತನಿಖೆ ನಡೆಸುತ್ತಿರುವ ರಾಜ್ಯದ ಮುಖ್ಯ ಕಾರ್ಯದರ್ಶಿ ರಾಜೀವ ಕುಮಾರ್ ನೇತೃತ್ವದ ಸಮಿತಿಯು ಆ.23ರಂದು ಸಲ್ಲಿಸಿದ್ದ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News