ಡಿವೈಎಫ್‌ಐ ಸಮ್ಮೇಳನ ಬ್ಯಾನರ್, ಫ್ಲೆಕ್ಸ್‌ಗೆ ಕಿಡಿಗೇಡಿಗಳಿಂದ ಹಾನಿ
Update: 2017-09-17 18:18 IST
ಮಂಗಳೂರು, ಸೆ. 17: ಡಿವೈಎಫ್‌ಐನ ದ.ಕ. ಜಿಲ್ಲಾ ಮಟ್ಟದ 13ನೆ ಸಮ್ಮೇಳನದ ಅಂಗವಾಗಿ ನಗರದ ನಂತೂರು ವೃತ್ತದ ಬಳಿ ಹಾಕಲಾಗಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳಿಗೆ ಕಿಡಿಗೇಡಿಗಳು ಹಾನಿ ಮಾಡಿರುವ ಘಟನೆ ನಡೆದಿದೆ.
ನಂತೂರಿನ ಶಾಂತಿಕಿರಣದ ಗೌರಿ ಲಂಕೇಶ್ ವೇದಿಕೆಯಲ್ಲಿ ಇಂದು ಬೆಳಗ್ಗೆ 10.30ರಿಂದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಇದರಂಗವಾಗಿ ನಾಡೋಜ ಡಾ. ಕಯ್ಯಿರ ಕಿಂಞಣ್ಣ ರೈ ವೃತ್ತದಲ್ಲಿ ಸಮ್ಮೇಳನದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಇಂದು ಬೆಳಗ್ಗಿನ ವೇಳೆ ಕಿಡಿಗೇಡಿಗಳು ಬ್ಯಾನರ್ ಹಾಗೂ ಫ್ಲೆಕ್ಸ್ ಗಳನ್ನು ಹರಿದು ಹಾನಿಗೊಳಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಪೊಲೀಸರಿಗೆ ಮೌಖಿಕವಾಗಿ ದೂರು ನೀಡಲಾಗಿದೆ. ಪ್ರಸ್ತುತ ಸಮ್ಮೇಳನದಲ್ಲಿ ಇಂದು ಸಂಜೆಯವರೆಗೂ ಸಂಘಟಕರು ನಿರತರಾಗಿರುವುದರಿಂದ ನಾಳೆ ಬೆಳಗ್ಗೆ ಈ ಬಗ್ಗೆ ಲಿಖಿತ ದೂರು ನೀಡಲಾಗುವುದು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.