ಹೂಡೆ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಉಡುಪಿ, ಸೆ.17: ಕರ್ನಾಟಕ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್‌ನ 2016-17ರ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಇತ್ತೀಚೆಗೆ ಹೂಡೆಯ ಸಾಲಿಹಾತ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮೌಲಾನ ಅಸ್ಘರುಲ್ಲಾ ಖಾಸ್ಮಿ ಮಾತನಾಡಿ, ಇಸ್ಲಾಮಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಧಾರ್ಮಿಕ ಶಿಕ್ಷಣದೊಂದಿಗೆ ಆಧುನಿಕ ಶಿಕ್ಷಣವನ್ನು ಪಡೆಯಬೇಕು. ಸಮುದಾಯವು ಈ ನಿಟ್ಟಿನಲ್ಲಿ ಪ್ರಯತ್ನಿಸಿದಾಗ ಮಾತ್ರ ಸಮುದಾಯವು ಸಬಲೀಕರಣ ಹೊಂದಲು ಸಾಧ್ಯವಾಗುತ್ತದೆ. ಶಿಕ್ಷಣವು ಅಂಧ ಕಾರವನ್ನು ಹೋಗಲಾಡಿಸಿ ಬೆಳಕನ್ನು ಪಸರಿಸುವ ಮಾಧ್ಯಮ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್‌ನ ರಾಜ್ಯ ಸಲಹಾ ಸಮಿತಿ ಸದಸ್ಯ ಹಾಗೂ ಮನ್ಸೂರ ಅರೇಬಿಕ್ ಕಾಲೇಜಿನ ಮಾಜಿ ಪ್ರಾಂಶುಪಾಲ ಮುನವ್ವರ್ ಪಾಶ ಮಾತನಾಡಿ, ಆಧುನಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣ ಜೊತೆಯಾದಾಗ ಮನುಷ್ಯ ಮಾನವೀಯ ಕಳಕಳಿಯಿಂದ ಬದುಕಲು ಸಾಧ್ಯವಾಗುತ್ತದೆ. ಸರಿಯಾದ ಮೌಲ್ಯಯುತ ಶಿಕ್ಷಣ ಇಲ್ಲದ ಕಾರಣ ಇವತ್ತಿನ ದಿನ ವಿದ್ಯಾವಂತರು ಹಿಂಸೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಆದ್ದರಿಂದ ಮೌಲ್ಯ ಶಿಕ್ಷಣ ನೀಡುದರೊಂದಿಗೆ ಮಾನವೀಯ ಕಳಕಳಿಯುಳ್ಳ ಸಮಾಜ ನಿರ್ಮಿಸಲು ಪ್ರಯತ್ನಿಸಬೇಕೆಂದು ಹೇಳಿದರು.
ಮೌಲಾನ ಆದಮ್ ಸಾಹೇಬ್, ಮೌಲಾನ ಅಬೂಬಕ್ಕರ್ ಸಾಹೇಬ್ ಲತೀಫ್, ಮೌಲಾನ ಆದಿಲ್ ನದ್ವಿ, ಜಮಾಅತೆ ಇಸ್ಲಾಮಿ ಹೂಡೆ ಘಟಕದ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್, ಮೌಲಾನ ರಹಮತುಲ್ಲಾ ಸಾಹೇಬ್, ಮೌಲಾನ ಮುದಸ್ಸಿರ್ ನಿಯಾಝಿ ಉಪಸ್ಥಿತರಿದ್ದರು.
ಇಸ್ಲಾಮ್ ಫಲಾಹಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮೌಲಾನ ಅಶ್ಫಾಕ್ ಮೂಮೀನ್ ಕುರ್ ಆನ್ ಪಠಿಸಿದರು. ಜಿ.ಎಂ. ಶರೀಫ್ ಕಾರ್ಯಕ್ರಮ ನಿರೂಪಿಸಿದರು.