“ಕೊಹ್ಲಿ ನನ್ನನ್ನು ಮದುವೆಯಾಗಿ”
ಹೊಸದಿಲ್ಲಿ, ಸೆ.17: ಪಂದ್ಯ ವೀಕ್ಷಿಸುವ ಪ್ರೇಕ್ಷಕರಿಂದ ಪ್ರಸಿದ್ಧ ಕ್ರಿಕೆಟಿಗರಿಗೆ ಮದುವೆ ಪ್ರಸ್ತಾಪಗಳು ಬರುತ್ತಲೇ ಇರುತ್ತವೆ. ಆದರೆ ಕ್ರಿಕೆಟಿಗರು ಇವುಗಳಿಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆದರೆ ಈ ಬಾರಿ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿಯವರಿಗೆ ಬಂದ ಮದುವೆ ಪ್ರಸ್ತಾಪವೊಂದು ಸ್ವತಃ ವಿರಾಟ್ ಕೊಹ್ಲಿಯೇ ತಲೆಕೆಡಿಸಿಕೊಳ್ಳುವಷ್ಟು ವಿಚಿತ್ರವಾಗಿದೆ. ಏಕೆಂದರೆ ಕೊಹ್ಲಿಯವರಿಗೆ, “ಮದುವೆಯಾಗುತ್ತೀರಾ?” ಎಂದು ಕೇಳಿದ್ದು, ಓರ್ವ ಪಾಕ್ ಪೊಲೀಸ್!.
ಈ ಘಟನೆ ನಡೆದದ್ದು ಪಾಕ್ ಮತ್ತು ವಿಶ್ವ XI ಟಿ20 ಪಂದ್ಯದ ವೇಳೆ. ಓರ್ವ ಮಧ್ಯವಯಸ್ಕ ಪಾಕ್ ಪೊಲೀಸ್ ಸಿಬ್ಬಂದಿಯೋರ್ವ, “ಕೊಹ್ಲಿ ನನ್ನನ್ನು ಮದುವೆಯಾಗಿ” ಎಂದು ಭಿತ್ತಿಪತ್ರ ಹಿಡಿದು ಎಲ್ಲರ ಗಮನ ಸೆಳೆದಿದ್ದಾನೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೊತೆಗೆ ಈ ಫೋಟೊವನ್ನು ಮುಂದಿಟ್ಟು ಟ್ವಿಟ್ಟರಿಗರು ವಿರಾಟ್ ರ ಕಾಲೆಳೆಯಲು ಆರಂಭಿಸಿದ್ದಾರೆ. “ಈ ಬಗ್ಗೆ ಕೊಹ್ಲಿಯವರ ಪ್ರೇಯಸಿ, ನಟಿ ಅನುಷ್ಕಾ ಶರ್ಮಾ ಏನು ಹೇಳುತ್ತಾರೆ” ಎಂದು ಹಲವರು ಟ್ವೀಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿಯವರಿಗೆ ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಪಾಕ್ ನಲ್ಲೂ ಕೊಹ್ಲಿಯವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಶಿಕ್ಷಕರ ದಿನಾಚರಣೆಯ ಸಂದರ್ಭ ಕ್ರಿಕೆಟ್ ದಿಗ್ಗಜರಿಗೆ ಕೃತಜ್ಞತೆ ಸಲ್ಲಿಸಿದ್ದ ಕೊಹ್ಲಿಯವರ ಫೋಟೊವೊಂದಕ್ಕೆ ಪಾಕ್ ಅಭಿಮಾನಿಗಳಿಂದ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.