ಹೆತ್ತವರನ್ನು ನಿರ್ಗತಿಕರನ್ನಾಗಿಸಿದ ಮಕ್ಕಳೂ ಮುಂದೆ ನಿರ್ಗತಿಕರಾಗುತ್ತಾರೆ: ನಾರಾಯಣ್ ತಲಪಾಡಿ
ಕೊಣಾಜೆ, ಸೆ. 17: ಪ್ರೀತಿಯಿಂದ ಸಲಹಿ ಹೆತ್ತು ಹೊತ್ತು ದೊಡ್ಡವರನ್ನಾಗಿಸಿ ತಮ್ಮೆಲ್ಲಾ ಸುಖವನ್ನು ಮಕ್ಕಳಿಗೆ ಧಾರೆಯೆರೆದ ಹೆತ್ತವರನ್ನು ನಿರ್ಗತಿಕರನ್ನಾಗಿಸುವ ಮಕ್ಕಳು ಕೂಡಾ ಭವಿಷ್ಯದಲ್ಲಿ ಎಂದಾದರೂ ನಿರ್ಗತಿಕರಾಗುವಿರಿ ಎಂಬ ಕಹಿ ಸತ್ಯವನ್ನು ಎಂದಿಗೂ ಮರೆಯಬೇಡಿ ಎಂದು ತಲಪಾಡಿ ಬಿಲ್ಲವ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ ಯುವ ಪೀಳಿಗೆಗೆ ಎಚ್ಚರಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಮತ್ತು ಇದರ ಅಂಗ ಸಂಸ್ಥೆಗಳಾದ ಬ್ರಹ್ಮಶ್ರೀ ನಾರಾಯಣ ಗುರು ಗ್ರಾಮ ಸಮಿತಿ, ನಾರಾಯಣ ಗುರು ಯುವ ಘಟಕ, ನಾರಾಯಣ ಗುರು ಮಹಿಳಾ ಘಟಕದ ಸದಸ್ಯರೆಲ್ಲರೂ ಜಂಟಿಯಾಗಿ ರವಿವಾರ ದೇರಳಕಟ್ಟೆ ಬೆಳ್ಮದ ಸೇವಾಶ್ರಮದ ಅನಾಥ ಮಹಿಳಾ ವೃದ್ಧರೊಂದಿಗೆ ಆಚರಿಸಿದ 'ಸೇವಾಶ್ರಮದಲ್ಲೊಂದು ದಿನ' ಎಂಬ ವಿಶೇಷ ಕಾರ್ಯ ಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಯೌವನ ಎಂಬುದು ಎಂದಿಗೂ ಶಾಶ್ವತ ಅಲ್ಲ. ಹೆತ್ತವರಿಗೆ ವಯಸ್ಸಾಯಿತೆಂದು ಅವರನ್ನು ಕಡೆಗಣಿಸಿ ಅನಾಥಾಶ್ರಮಗಳಿಗೆ ದೂಡಿದರೆ ನಮಗೂ ಭವಿಷ್ಯದಲ್ಲಿ ವಯಸ್ಸಾದಾಗ ನಮ್ಮ ಮಕ್ಕಳೂ ಕೂಡ ನಮ್ಮನ್ನು ಕಡೆಗಣಿಸಿ ಅನಾಥಾಶ್ರಮಗಳಿಗೆ ದೂಡುವರು. ನಾವಿಂದು ತುಳುನಾಡಿನ ಕೃಷಿ ಪರಂಪರೆ ಕೂಡು ಕುಟುಂಬ ಪದ್ಧತಿಯಿಂದ ವಿಮುಖರಾದ ಪರಿಣಾಮವೇ ಹೆತ್ತವರಿಂದು ವಯಸ್ಸಾದ ನಂತರ ಅನಾಥಾಶ್ರಮಗಳಿಗೆ ಸೇರುವಂತಾಗಿದೆ ಎಂದು ನುಡಿದರು.
ಬೆಳ್ಮ ಸೇವಾಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಜಿ.ಆರ್.ಶೆಟ್ಟಿ ಮಾತನಾಡಿ ಅನಾಥ ವೃದ್ಧರ ಮೇಲೆ ಪ್ರೀತಿ ಇರಿಸಿರುವ ನಾರಾಯಣ ಗುರು ಸೇವಾ ಸಂಘದ ಸದಸ್ಯರು ಪ್ರತೀ ವರುಷ ಬಂದು ವೃದ್ಧರೊಂದಿಗೆ ತಮ್ಮ ಅಮೂಲ್ಯವಾದ ಸಮಯವನ್ನು ಸದ್ವಿನಿಯೋಗಿಸುತ್ತಿರುವುದು ಶ್ಲಾಘನೀಯ. ಕೆಂಪು ರಕ್ತವನ್ನೇ ಹಂಚಿಕೊಂಡು ಹುಟ್ಟಿರುವ ಮನುಷ್ಯರ ನಡುವೆ ಮೇಲು, ಕೀಲು, ಬಡವ, ಶ್ರೀಮಂತರೆನ್ನುವ ಭೇದಭಾವ ಸಲ್ಲದು ಎಂದರು.
ಸೇವಾಶ್ರಮದ ಮಹಿಳಾ ವೃದ್ಧರಿಗೆ ಸಂಘದ ಸದಸ್ಯರು ಏರ್ಪಡಿಸಿದ ವಿವಿಧ ಒಳಾಂಗಣ ಕ್ರೀಡಾ ಸ್ಫರ್ದೆಯಲ್ಲಿ ವೃದ್ಧೆಯರು ಬಹಳ ಉತ್ಸಾಹದಿಂದ ಭಾಗವಹಿಸಿ ಬಹುಮಾನ ಗೆದ್ದರು. ಬಳಿಕ ಸಂಘದ ಸದಸ್ಯರೆಲ್ಲರೂ ಆಶ್ರಮವಾಸಿಗಳೊಂದಿಗೆ ಸಹಭೋಜನಗೈದರು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿಯ ಕೋಶಾಧಿಕಾರಿ ನಾರಾಯಣ ಪೂಜಾರಿಯವರು ಸಭಾಧ್ಯಕ್ಷತೆ ವಹಿಸಿದ್ದರು.
ಸೇವಾಶ್ರಮ ಹಾಗೂ ಸೇವಾಭಾವ ಚಾರಿಟೇಬಲ್ ಟ್ರಸ್ಟ್‌ನ ಸಂಚಾಲಕರಾದ ಗೀತಾ ಆರ್.ಶೆಟ್ಟಿ, ತೇಜಶ್ರೀ ಅಂಚನ್, ಕೃಷ್ಣ ಪೂಜಾರಿ, ಬೆಳ್ಮ ಬಿರ್ವೆರೆ ಬಳಗದ ಅಧ್ಯಕ್ಷ ರಾಜೀವ ಪೂಜಾರಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿಯ ಅಧ್ಯಕ್ಷರಾದ ಭೋಜ ಕುಕ್ಯಾನ್ ಆಚಾರಿ ಹಿತ್ಲು, ಯುವ ಘಟಕದ ಅಧ್ಯಕ್ಷ ಹರೀಶ್ ಪೂಜಾರಿ ಕೊಣಾಜೆ, ಮಹಿಳಾ ಘಟಕದ ಅಧ್ಯಕ್ಷೆ ಲೋಲಾಕ್ಷಿ ಡಿ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.