ಜಗತ್ತಿನ ಯಾವುದೇ ಯೋಜನೆ ಇಷ್ಟೊಂದು ತಡೆ ಎದುರಿಸಿಲ್ಲ: ಪ್ರಧಾನಿ
ಹೊಸದಿಲ್ಲಿ,ಸೆ.17: ಜಗತ್ತಿನ ಯಾವುದೇ ಯೋಜನೆ ಎದುರಿಸದ ಅಡ್ಡಿಗಳನ್ನು ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆ ಎದುರಿಸಿದೆ ಎಂದು ಪ್ರಧಾನಿ ನೇಂದ್ರ ಮೋದಿ ರವಿವಾರ ಹೇಳಿದ್ದಾರೆ.
ಅಣೆಕಟ್ಟಿನಿಂದ 55 ಕಿ.ಮೀ. ದೂರದಲ್ಲಿರುವ ವಡೋದರಾ ಜಿಲ್ಲೆಯ ದಾಭೋಯಿ ಪಟ್ಟಣದಿಂದ ಹೊರಟ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ದಾರ್ ಸರೋವರ್ ಭಾರತದ ನೂತನ ಶಕ್ತಿಯ ಸಂಕೇತವಾಗಲಿದೆ. ಇದು ಈ ವಲಯದ ಬೆಳವಣಿಗೆಗೆ ಉತ್ತೇಜನ ನೀಡಲಿದೆ. ಈ ಯೋಜನೆ ‘ಎಂಜಿನಿಯರಿಂಗ್‌ನ ಅದ್ಭುತ’ ಎಂದರು.
ತನ್ನ 67ನೇ ಜನ್ಮದಿನಾಚರಣೆ ದಿನ ಅಣೆಕಟ್ಟು ಲೋಕಾರ್ಪಣೆಗೊಳಿಸಿರುವ ಪ್ರಧಾನಿ, ಹಲವರು ಮಿಥ್ಯಾರೋಪ ಮಾಡಿದರು. ಹಲವರು ಈ ಯೋಜನೆ ಸ್ಥಗಿತಗೊಳಿಸಲು ಸಂಚು ಹೂಡಿದರು. ಆದರೆ, ನಾವು ಇದನ್ನು ರಾಜಕೀಯ ಮರಕ್ಕಾಗಿ ಬಳಸಿಕೊಂಡಿಲ್ಲ ಎಂದರು.
ಈ ಯೋಜನೆ ಸ್ಥಗಿತಗೊಳಿಸಲು ಪ್ರಯತ್ನಿಸಿದ ಪ್ರತಿಯೊಬ್ಬರ ಬಗ್ಗೆ ನನಗೆ ಅರಿವಿದೆ. ಆದರೆ, ನಾನು ಅವರ ಹೆಸರು ಹೇಳಲಾರೆ. ಯಾಕೆಂದರೆ, ನಾನು ಆ ಹಾದಿಯಲ್ಲಿ ಕ್ರಮಿಸಲು ಬಯಸಲಾರೆ ಎಂದರು.
ಯೋಜನೆ ವಿರುದ್ಧ ಮಿಥ್ಯಾ ಮಾಹಿತಿಗಳ ಸಾಮೂಹಿಕ ಅಭಿಯಾನ ನಡೆಸಲಾಗಿದೆ. ಯೋಜನೆಗೆ ಈ ಹಿಂದೆ ಸಾಲ ನೀಡುವುದಾಗಿ ಒಪ್ಪಿಕೊಂಡ ವಿಶ್ವ ಬ್ಯಾಂಕ್ ಅನಂತರ ಪರಿಸರ ಕಾಳಜಿಯ ಕಾರಣ ನೀಡಿ ನಿರಾಕರಿಸಿತು. ಆದರೆ, ನಾವು ಸ್ವಂತವಾಗಿ ಈ ಬೃಹತ್ ಯೋಜನೆಯನ್ನು ಪೂರ್ಣಗೊಳಿಸಿದೆವು ಎಂದು ಅವರು ಹೇಳಿದರು.
ಅಭಿವೃದ್ಧಿಯ ವೇಗ ನಿಧಾನವಾಗಲು ನೀರಿನ ಕೊರತೆ ಪ್ರಮುಖ ಕಾರಣ ಎಂದು ಹೇಳಿದ ನರೇಂದ್ರ ಮೋದಿ, ಈ ಯೋಜನೆ ಗುಜರಾತ್‌ನ ಇಂಡೊ-ಪಾಕ್ ಗಡಿಯಲ್ಲಿರುವ ಬಿಎಸ್‌ಎಫ್ ಯೋಧರಿಗೆ ನೀರು ಪೂರೈಸಲು ನೆರವಾಗಲಿದೆ. ಅಲ್ಲದೆ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಮಹಾರಾಷ್ಟ್ರಕ್ಕೆ ಲಾಭವಾಗಲಿದೆ ಎಂದರು.