ಶ್ರೀಕೃಷ್ಣಾಷ್ಟಮಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ಉಡುಪಿ, ಸೆ.17: ವೇಷ ಅಂದರೆ ಶ್ರೀಕೃಷ್ಣನಿಗೆ ಬಹಳ ಪ್ರೀತಿ. ಶ್ರೀಕೃಷ್ಣಾಷ್ಟಮಿ ಹಾಗೂ ವಿಟ್ಲಪಿಂಡಿಯ ನೃತ್ಯ, ವೇಷ, ಕುಣಿತ ಎಲ್ಲವೂ ಕೃಷ್ಣನ ಸೇವೆಯಾಗಿದೆ ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪೇಜಾವರ ಮಠದ ವತಿಯಿಂದ ಶ್ರೀಕೃಷ್ಣಾಜನ್ಮಾಷ್ಟಮಿಯ ಪ್ರಯುಕ್ತ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳ ವಿಜೇತ ರಿಗೆ ರಾಜಾಂಗಣದಲ್ಲಿ ರವಿವಾರ ಬಹುಮಾನ ವಿತರಿಸಿ ಅವರು ಆಶೀರ್ವಚನ ನೀಡಿದರು.
ಈ ಬಾರಿಯ ಸ್ಪರ್ಧೆಯಲ್ಲಿ ವೇಷ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರೆ ಜಾನಪದ ತಂಡಗಳು ನಾವು ನಿರೀಕ್ಷಿಸಿದಷ್ಟು ಬಂದಿಲ್ಲ. ಜಾನಪದ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂಬುದು ನಮ್ಮ ಅಪೇಕ್ಷೆ ಯಾಗಿದೆ ಎಂದು ಅವರು ತಿಳಿಸಿದರು.
ಸ್ಪರ್ಧೆಯಲ್ಲಿ ಬಹುಮಾನ ಸಿಗದವರು ನಿರಾಶೆ ಆಗಬಾರದು. ಎಲ್ಲರಿಗೂ ಬಹುಮಾನ ನೀಡಲು ಆಗಲ್ಲ. ಇದೆಲ್ಲವು ಶ್ರೀಕೃಷ್ಣನ ಸೇವೆಯಾಗಿದೆ. ಎಲ್ಲ ಕಲಾವಿದರು ಹಾಗೂ ಮಕ್ಕಳ ಮೇಲೆ ಶ್ರೀಕೃಷ್ಣ ಅನುಗ್ರಹಿಸಲಿ ಎಂದು ಸ್ವಾಮೀಜಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.