×
Ad

ವ್ಯಾಪಂ ಹಗರಣ : 9 ವಿಶೇಷ ನ್ಯಾಯಾಲಯ ಮುಚ್ಚಲು ಹೈಕೋರ್ಟ್ ಸೂಚನೆ

Update: 2017-09-17 20:31 IST

ಹೊಸದಿಲ್ಲಿ, ಸೆ.17: ವ್ಯಾಪಂ ಹಗರಣ ಕುರಿತಾದ ಪ್ರಕರಣಗಳ ತನಿಖೆ ನಡೆಸುತ್ತಿರುವ 9 ವಿಶೇಷ ಸಿಬಿಐ ನ್ಯಾಯಾಲಯಗಳನ್ನು ಸಿಬಿಐ ಕೋರಿಕೆ ಮೇರೆಗೆ ಮುಚ್ಚಲು ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿದೆ.

ಬಿಗಿ ಭದ್ರತೆಯ ಅಗತ್ಯವಿರುವ ಕಾರಣ ವಿಚಾರಣೆಯನ್ನು ಇತರ ವಿಶೇಷ ನ್ಯಾಯಾಲಯಗಳಿಗೆ ವರ್ಗಾಯಿಸುವಂತೆಯೂ ಸಿಬಿಐ ಮನವಿ ಸಲ್ಲಿಸಿದೆ. ವ್ಯಾಪಂ ಹಗರಣದ ವಿಚಾರಣೆಗಾಗಿ ಹೈಕೋರ್ಟ್ 22 ವಿಶೇಷ ನ್ಯಾಯಾಲಯ ರಚಿಸಿತ್ತು. ಬಳಿಕ ಇದರಲ್ಲಿ ನಾಲ್ಕನ್ನು ಮುಚ್ಚಲಾಗಿತ್ತು. ಉಳಿದ 18 ನ್ಯಾಯಾಲಯಗಳಲ್ಲಿ ಭೋಪಾಲ, ಗ್ವಾಲಿಯರ್, ಜಬಲ್‌ಪುರ ಹಾಗೂ ಇಂದೋರ್‌ನಲ್ಲಿ ಒಟ್ಟು 9 ನ್ಯಾಯಾಲಯಗಳಿದ್ದರೆ ರೆವ, ದಮೋಹ್, ಸಾಗರ್, ಬಲಘಟ್, ಮೊರೆನ, ಚತ್ತರ್‌ಪುರ, ಗುನ, ಭಿಂಡ್ ಮತ್ತು ಖಾಂಡ್ವಾ ಜಿಲ್ಲೆಯಲ್ಲಿ ತಲಾ ಒಂದು ನ್ಯಾಯಾಲಯವಿದೆ. ಈ ಒಂಬತ್ತು ಜಿಲ್ಲೆಗಳ ನ್ಯಾಯಾಲಯವನ್ನು ಮುಚ್ಚಲಾಗುವುದು ಮತ್ತು ಇಲ್ಲಿರುವ 38 ಪ್ರಕರಣಗಳನ್ನು ಇತರ ವ್ಯಾಪಮ್ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗುವುದು. ಇದೀಗ ಸಾಗುತ್ತಿರುವ ವಿಚಾರಣಾ ಪ್ರಕ್ರಿಯೆಗೆ ಇದರಿಂದ ಪರಿಣಾಮ ಬೀರದು ಎಂದು ಸಿಬಿಐ ಮೂಲಗಳು ತಿಳಿಸಿವೆ.

 ಭೋಪಾಲ್, ಗ್ವಾಲಿಯರ್, ಜಬಲ್‌ಪುರ ಮತ್ತು ಇಂದೋರ್‌ನಲ್ಲಿರುವ ನ್ಯಾಯಾಲಯಗಳು ಮೂಲಭೂತ ಅವಶ್ಯಕತೆ ಹಾಗೂ ಸಾಕಷ್ಟು ಮಾನವಸಂಪನ್ಮೂಲಗಳನ್ನು ಗಳನ್ನು ಹೊಂದಿವೆ. ಭೋಪಾಲ್ ವಿಶೇಷ ನ್ಯಾಯಾಲಯದಲ್ಲಿ ಮೂವರು ವಿಶೇಷ ನ್ಯಾಯಾಧೀಶರು ಹಾಗೂ ಓರ್ವ ವಿಶೇಷ ದಂಡಾಧಿಕಾರಿ ಇದ್ದರೆ ಗ್ವಾಲಿಯರ್ ನ್ಯಾಯಾಲಯದಲ್ಲಿ ಇಬ್ಬರು ವಿಶೇಷ ನ್ಯಾಯಾಧೀಶರು ಹಾಗೂ ಓರ್ವ ವಿಶೇಷ ದಂಡಾಧಿಕಾರಿ, ಇಂದೋರ್ ಮತ್ತು ಜಬಲ್‌ಪುರ ನ್ಯಾಯಾಲಯದಲ್ಲಿ ತಲಾ ಓರ್ವ ವಿಶೇಷ ನ್ಯಾಯಾಧೀಶರಿದ್ದಾರೆ.

ಮಧ್ಯಪ್ರದೇಶದ ಸರಕಾರಿ ಕಾಲೇಜುಗಳ ಪ್ರವೇಶಕ್ಕೆ ನಡೆದ ಆಯ್ಕೆ ಪ್ರಕ್ರಿಯೆ ಹಾಗೂ ಉದ್ಯೋಗ ನೇಮಕಾತಿ ಸಂದರ್ಭ ‘ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ(ವ್ಯಾಪಮ್)ಯಲ್ಲಿ ವ್ಯಾಪಕ ಅವ್ಯವಹಾರ ನಡೆಸಲಾಗಿದೆ. ಸಾಮೂಹಿಕ ನಕಲು ಪ್ರಕ್ರಿಯೆ, ಬದಲಿ ಅಭ್ಯರ್ಥಿ ಪರೀಕ್ಷೆ ಬರೆದಿರುವುದು, ಕಾಲಿ ಉತ್ತರ ಪತ್ರಿಕೆ ನೀಡಿರುವುದು, ನಕಲಿ ಅಂಕ ನೀಡಿರುವುದು ಇತ್ಯಾದಿ ಅಕ್ರಮ ನಡೆಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಿಬಿಐ 154 ಪ್ರಕರಣಗಳನ್ನು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯೋರ್ವ ಮೃತಪಟ್ಟ ಘಟನೆಯ ಕುರಿತು ಪ್ರಕರಣವನ್ನು ಪ್ರತ್ಯೇಕವಾಗಿ ದಾಖಲಿಸಿಕೊಂಡಿದೆ.

ಈ ಪೈಕಿ 90 ಪ್ರಕರಣಗಳಲ್ಲಿ ಅಂತಿಮ ವರದಿ ಸಲ್ಲಿಸಲಾಗಿದ್ದರೆ(84 ಚಾರ್ಜ್‌ಶೀಟ್, 6 ಪ್ರಕರಣ ಮುಕ್ತಾಯ ವರದಿ) ಉಳಿದ 64 ಪ್ರಕರಣಗಳಲ್ಲಿ ಅಂತಿಮ ವರದಿಯನ್ನು ಮುಂದಿನ ತಿಂಗಳಲ್ಲಿ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ, 14 ಪ್ರಕರಣಗಳಲ್ಲಿ ಸ್ಥಳೀಯ ಪೊಲೀಸರು ಆರೋಪಪಟ್ಟಿ ಸಲ್ಲಿಸಿರುವ ಕಾರಣ ವಿಚಾರಣೆಯನ್ನು ನೇರವಾಗಿ ಕೈಗೆತ್ತಿಕೊಳ್ಳಲಾಗಿದೆ. ಎರಡು ಪ್ರಕರಣಗಳಲ್ಲಿ ಅಪರಾಧದ ಪ್ರಮಾಣವನ್ನು ಘೋಷಿಸಲಾಗಿದೆ. 2017ರ ಆಗಸ್ಟ್ 31ರವರೆಗೆ, 10,188 ಜನರನ್ನು ತನಿಖೆ ನಡೆಸಲಾಗಿದೆ. ಇವರಲ್ಲಿ 5,603 ಸಾಕ್ಷಿಗಳು ಹಾಗೂ 5,215 ಆರೋಪಿಗಳು. 348 ಮಂದಿಯ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News