ಡೇರಾ ಸಚ್ಚಾದ ಅನುಯಾಯಿಗಳನ್ನು ಉಳಿಸಿಕೊಳ್ಳಲು ಸಾಮಾಜಿಕ ಮಾಧ್ಯಮದ ಬಳಕೆ
ಚಂಡೀಗಡ, ಸೆ.17: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿರುವ ಸ್ವಘೋಷಿತ ದೇವಮಾನವ ಗುರ್ಮೀತ್ ಸಿಂಗ್‌ನ ಅನುಯಾಯಿಗಳನ್ನು ಡೇರಾ ಸಚ್ಚಾ ಸೌದದ ನೆರಳಿನಲ್ಲೇ ಇರಿಸಿಕೊಳ್ಳಲು ಪ್ರಯತ್ನ ಮುಂದುವರಿಸಿರುವ ಡೇರಾದ ಮಾಹಿತಿ ತಂತ್ರಜ್ಞಾನ ವಿಭಾಗದ ತಂಡ, ಇದಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಗರಿಷ್ಠಮಟ್ಟದಲ್ಲಿ ಬಳಸಿಕೊಳ್ಳುತ್ತಿದೆ. ಗುರ್ಮೀತ್ ಸಿಂಗ್ ಓರ್ವ ನೈಜ ಸಂತ ಹಾಗೂ ಸಮಾಜ ಸೇವಕರಾಗಿದ್ದು ಇವರನ್ನು ಜೈಲುಶಿಕ್ಷೆಗೆ ಗುರಿಪಡಿಸಿರುವ ಹಿಂದೆ ಭಾರೀ ಷಡ್ಯಂತ್ರವೊಂದು ಅಡಗಿದೆ ಎಂದು ಹೇಳುವ ಸಂದೇಶವನ್ನು ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಗ್ರಾಮ್ ಹಾಗೂ ಯೂಟ್ಯೂಬ್‌ಗಳಲ್ಲಿ ಹರಿಯಬಿಡಲಾಗುತ್ತಿದೆ. ಅಲ್ಲದೆ ಗುರ್ಮೀತ್ ಸಿಂಗ್‌ನನ್ನು ವೈಭವೀಕರಿಸುವ ವೀಡಿಯೊ, ಆಡಿಯೊ ದೃಶ್ಯಾವಳಿಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಕಳಂಕಿತ ‘ದೇವಮಾನವ’ ಗುರ್ಮಿತ್ ಸಿಂಗ್ ಬಗ್ಗೆ ಅನುಯಾಯಿಗಳು ಕ್ರಮೇಣ ವಿಶ್ವಾಸ ಮತ್ತು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂಬ ವರದಿಯಿಂದ ವಿಚಲಿತರಾಗಿರುವ ಡೇರಾ ಸಚ್ಚಾ ಸೌದದ ಕೇಂದ್ರ ಕಚೇರಿಯ ಆಡಳಿತ ಮಂಡಳಿ, ಅನುಯಾಯಿಗಳ ಓಲೈಕೆಗೆ ಮುಂದಾಗಿದ್ದು, ಗುರ್ಮಿತ್ ವಿರುದ್ಧ ನಡೆಸಲಾಗುತ್ತಿರುವ ‘ಸುಳ್ಳು ಸುದ್ದಿ’ ಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದೆ. ಅಲ್ಲದೆ ಡೇರಾದ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ಅಕ್ರಮ ವ್ಯವಹಾರ ಅಥವಾ ಕಾನೂನುಬಾಹಿರ ವಸ್ತುಗಳು ಪತ್ತೆಯಾಗಿಲ್ಲ. ಈ ಬಗ್ಗೆ ಮಾಧ್ಯಮಗಳು ವ್ಯಾಪಕ ಅಪಪ್ರಚಾರದಲ್ಲಿ ತೊಡಗಿದ್ದು ಇದನ್ನು ನಂಬಬಾರದು. ‘ದೇವಮಾನವ’ ಗುರ್ಮಿತ್ ಅವರ ‘ಗುಹೆ’ಯಿಂದ ಸಾಧ್ವಿಯರ ನಿವಾಸಗಳಿಗೆ ಸುರಂಗ ಮಾರ್ಗ ಇತ್ತು ಎಂಬ ಸುದ್ದಿಯಂತೂ ಸುಳ್ಳಿನ ಪರಾಕಾಷ್ಟೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಾಧ್ಯಮಗಳಲ್ಲಿ, ಅದರಲ್ಲೂ ವಿಶೇಷವಾಗಿ ದೃಶ್ಯಮಾಧ್ಯಮಗಳಲ್ಲಿ ಏಕಪಕ್ಷೀಯ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ದೂರಿರುವ 10 ನಿಮಿಷಗಳಾವಧಿಯ ಒಂದು ವೀಡಿಯೊ ದೃಶ್ಯಾವಳಿಯಲ್ಲಿ ಗುರ್ಮಿತ್ ನಡೆಸಿರುವ ಸಮಾಜಸೇವೆ ಹಾಗೂ ಜನೋಪಯೋಗೀ ಕಾರ್ಯಕ್ರಮಗಳನ್ನು ಪಟ್ಟಿ ಮಾಡಲಾಗಿದೆ. ಇಂತಹ ಸಂದೇಶಗಳಿಗೆ ಕೆಲವು ಅನುಯಾಯಿಗಳು ಪೂರಕವಾಗಿ ಸ್ಪಂದಿಸಿದ್ದಾರೆ. ‘ಮಹಾಪುರುಷರು ಹಾಗೂ ದೇವಮಾನವರನ್ನು ಸಮಾಜ ಹೇಗೆ ನಡೆಸಿಕೊಂಡಿದೆ ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ’ ಎಂದು ಓರ್ವ ಅನುಯಾಯಿ ಪ್ರತಿಕ್ರಿಯಿಸಿದ್ದಾನೆ.