ಗದ್ದೆಗಿಳಿದು ನೇಜಿ ನೆಟ್ಟ ಸಚಿವ ಯು.ಟಿ.ಖಾದರ್..!
ಕೊಣಾಜೆ, ಸೆ. 17: ಬರಡು ಭೂಮಿಯಾಗಿದ್ದ ಗದ್ದೆಯಲ್ಲಿ ಫಸಲು ತೆಗೆಯುವ ಹಂಬಲ, ಸಂಘಟಕರ ಉತ್ಸುಕತೆಗೆ ಆಹಾರ ಸಚಿವರ ಬೆಂಬಲ, ಇದಕ್ಕೆ ಸಾಕ್ಷಿಯಾದದ್ದು ಬರಡು ಭೂಮಿಯಾಗಿದ್ದ ಕೊಣಾಜೆ ಸಮೀಪದ ಪುರುಷರಕೋಡಿಯ ಪರಿವರ್ತನೆಗೊಂಡ ಕೆಸರುಗದ್ದೆ.
ಇಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ, ಸ್ಥಳೀಯ ಶಾಸಕರೂ ಆದ ಯು.ಟಿ.ಖಾದರ್ ಅವರು ಶೂ ಕಳಚಿ, ಪ್ಯಾಂಟ್ ಮೇಲಕ್ಕೆ ಎತ್ತಿ ಕೆಸರುಗದ್ದೆಗೆ ಇಳಿದೇ ಬಿಟ್ಟರು. ಕೈಯ್ಯಲ್ಲಿ ಪಚ್ಚೆ ನೇಜಿ ಹಿಡಿದು ಕೊಯ್ಲು ಮಾಡಲು ದೇಹವನ್ನೇ ಬಾಗಿಸಿದರು. ಒಂದಷ್ಟು ನೇಜಿ ನೆಟ್ಟು ಅಲ್ಲಿ ನೆರೆದ ಯುವ ಸಮೂಹಕ್ಕೆ, ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದರು. ಸಚಿವರು ನೇಜಿ ಕೊಯ್ಲು ಮಾಡುತ್ತಿದ್ದಂತೆ 72ರ ಹರೆಯದ ಮಹಿಳೆ, ಎ.ಪಿ.ಎಂ.ಸಿ. ಉಪಾಧ್ಯಕ್ಷೆ ಮುತ್ತಕ್ಕ ಶೆಟ್ಟಿ ಪಾಡ್ದನ ಹಾಡಿ ಗದ್ದೆ ನಾಟಿಗೆ ಮೆರುಗು ತಂದರು.
ಮಂಗಳೂರು ರಥಬೀದಿಯ ಡಾ.ಪಿ.ದಯಾನಂದ ಪೈ, ಪಿ.ಸತೀಶ ಪೈ, ಸರಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ರೆಡ್ ರಿಬ್ಬನ್, ಕೊಣಾಜೆ ಗ್ರಾ.ಪಂ., ದ.ಕ. ರೈತಸಂಘ, ಹಸಿರುಸೇನೆ ಹಾಗೂ ತೊಕ್ಕೊಟ್ಟು ಮಾಧ್ಯಮ ಕೇಂದ್ರದ ಸಹಯೋಗದಲ್ಲಿ 'ವಿದ್ಯಾರ್ಥಿಗಳ ನಡಿಗೆ ರೈತರ ಹಡೀಲು ಭೂಮಿಯ ಕಡೆಗೆ' ಹಾಗೂ ಕೊಣಾಜೆ ಗ್ರಾಮದ ಎರಡನೆ ವಾರ್ಡ್ ದತ್ತು ಸ್ವೀಕಾರ ಸಮಾರಂಭದ ಸಮಾರೋಪದಲ್ಲಿ ಸಚಿವ ಯು.ಟಿ.ಖಾದರ್ ನೇಜಿ ನೆಟ್ಟು ಎಲ್ಲರ ಗಮನ ಸೆಳೆದರು.
ತಂತ್ರಜ್ಞಾನ ಯುಗದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಯುವಜನತೆ ಕೃಷಿ, ಗದ್ದೆ ನಾಟಿಯತ್ತ ಆಕರ್ಷಿತರಾಗುವುದು ಸಮಾಜದಲ್ಲಿ ಉತ್ತಮ ಬೆಳವಣಿಗೆಯಾಗಿದೆ. ನೀರಿಲ್ಲದೆ ಬರಡಾಗಿರುವ ರೈತರ ಹಡೀಲು ಭೂಮಿಯನ್ನು ಹುಡುಕಿ ಅಲ್ಲಿ ಕೃಷಿ ಮಾಡಿ ಹಸಿರಾಗಿಸುವ ಪ್ರಯತ್ನ ಸ್ತುತ್ಯರ್ಹ ಕಾರ್ಯ ಎಂದು ಆಹಾರ ಸಚಿವರಾದ ಯು.ಟಿ.ಖಾದರ್ ಶ್ಲಾಘಿಸಿದರು.
ಈ ಸಂದರ್ಭ ಕೊಣಾಜೆ ಗ್ರಾ.ಪಂ. ಅಧ್ಯಕ್ಷ ಶೌಕತ್ ಅಲಿ, ತಾ.ಪಂ. ಸದಸ್ಯೆ ಪದ್ಮಾವತಿ, ಶಿಕ್ಷಕ ರವೀಂದ್ರ ರೈ, ರಹಿಮಾನ್ ಕೋಡಿಜಾಲ್, ಪದ್ಮನಾಭ ಪೂಜಾರಿ, ಪದ್ಮನಾಭ ಗಟ್ಟಿ, ಅಚ್ಯುತ ಗಟ್ಟಿ, ತಾ.ಪಂ. ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್, ಕಿನ್ಯ ಗ್ರಾ.ಪಂ. ಉಪಾಧ್ಯಕ್ಷ ಸಿರಾಜ್ ಕಿನ್ಯ ಉಪಸ್ಥಿತರಿದ್ದರು. ಸೇರಿದ ಜನತೆಗೆ, ಗದ್ದೆ ಕೊಯ್ಲು ಮಾಡುವವರಿಗೆ ನರ್ಸಪ್ಪ ಗೌಡರ ಮನೆಯಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.