ಗದ್ದೆಗೆ ಬಿದ್ದ ಬೈಕ್: ಸವಾರ ಮೃತ್ಯು
Update: 2017-09-17 21:17 IST
ಕೋಟ, ಸೆ.17: ಬೈಕೊಂದು ನಿಯಂತ್ರಣ ತಪ್ಪಿ ಗದ್ದೆಗೆ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೆ.16ರಂದು ಸಂಜೆ ವೇಳೆ ಪಾರಂಪಳ್ಳಿ ಎಂಬಲ್ಲಿ ನಡೆದಿದೆ.
ಮೃತರನ್ನು ಗುರುರಾಜ್ ಪೂಜಾರಿ(38) ಎಂದು ಗುರುತಿಸಲಾಗಿದೆ. ಮಲ್ಪೆ ಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು ಮೀನುಗಾರಿಕೆಗೆ ಸಂಬಂಧಿಸಿದ ಸೀಸ ಮತ್ತು ಇತರೆ ಸಾಮಾಗ್ರಿಯನ್ನು ತರಲು ಕೋಡಿ ಕನ್ಯಾನಕ್ಕೆ ಬೈಕಿನಲ್ಲಿ ಹೊರಟಿದ್ದರೆನ್ನಲಾಗಿದೆ.
ಸಾಲಿಗ್ರಾಮದಿಂದ ಪಾರಂಪಳ್ಳಿ ಕಡೆಗೆ ಹೋಗುವ ಕಾಂಕ್ರೀಟ್ ರಸ್ತೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಪಾರಂಪಳ್ಳಿಯ ಅಂಜನ ಮಯ್ಯ ಎಂಬವರ ನೀರು ತುಂಬಿದ ಕೃಷಿ ಮಾಡಿದ ಗದ್ದೆಗೆ ಬಿತ್ತೆನ್ನಲಾಗಿದೆ. ಇದರ ಪರಿಣಾಮ ಬೈಕ್‌ನಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಗುರುರಾಜ್ ಪೂಜಾರಿ ಸ್ಥಳದಲ್ಲೇ ಮೃತ ಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.