ಸುಲ್ತಾನ್ ಬತ್ತೇರಿಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ
ಮಂಗಳೂರು, ಸೆ. 17: ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಯುಷ್ ಆಸ್ಪತ್ರೆ ಮಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಅಕ್ಷರ ಸದನ ಅಂಗನವಾಡಿ ಕೇಂದ್ರ ಸುಲ್ತಾನ್ ಬತ್ತೇರಿಯಲ್ಲಿ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ನಡೆಸಲಾಯಿತು.
ಶಿಶು ಕಲ್ಯಾಣಾಧಿಕಾರಿ ಶೋಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಆಯುರ್ವೆದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಹೇಮವಾಣಿ.ಪಿ. ಅವರು ಪೌಷ್ಠಿಕ ಆಹಾರದ ಮಹತ್ವ ಮತ್ತು ಮಕ್ಕಳಿಗೆ ಕೊಡಬಹುದಾದ ವಿವಿಧ ಪೌಷ್ಠಿಕ ಆಹಾರ ತಯಾರಿಕಾ ವಿಧಾನವನ್ನು ವಿವರಿಸಿದರು.
ಹಿರಿಯ ಆಯುಷ್ ವೈದ್ಯಾಧಿಕಾರಿ ಡಾ.ದೇವದಾಸ್, ಬರ್ಕೆ ಠಾಣೆಯ ನಿರೀಕ್ಷಕ ರಾಮಕೃಷ್ಣ, ಮಾಜಿ ಕಾರ್ಪೊರೇಟರ್ ಕಮಲಾಕ್ಷ ಸಾಲಿಯಾನ್, ಲಿಂಕ್‌ನ ಆಪ್ತ ಸಮಾಲೋಚಕಿ ಲೀಡಿಯಾ, ಯುನೈಟೆಡ್ ಯೂತ್ ಕ್ಲಬ್‌ನ ವಾಸುದೇವ ಬೋಳಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸುಮಾರು 60 ಮಂದಿ ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡು ವಿವಿಧ ರೀತಿಯ ಪೌಷ್ಠಿಕ ಆಹಾರ ಪದಾರ್ಥಗಳನ್ನು ತಯಾರಿಸಿ ಪ್ರದರ್ಶಿಸಿದರು.ಅವರಿಗೆ ಇಲಾಖೆ ವತಿಯಿಂದ ಬಹುಮಾನ ವಿತರಿಸಲಾಯಿತು.
ಶುಶ್ರೂಷಕಿ ಸುನಂದಾ, ಅಂಗನವಾಡಿ ಮೇಲ್ವಿಚಾರಕಿ ಶೈಲಜಾ ಹಾಗೂ ಕಾರ್ಯಕರ್ತೆ ಕುಮುದಾಕ್ಷಿ ಸಹಕರಿಸಿದರು.