×
Ad

ಹೆಜಮಾಡಿ ಗರಡಿಯ ಬೀಗ ಮುರಿದು ಕಳ್ಳತನ

Update: 2017-09-17 21:38 IST

ಪಡುಬಿದ್ರೆ, ಸೆ. 17: ಹೆಜಮಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಮುಂಭಾಗದ ಬೀಗ ಮುರಿದ ಒಳ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯಿಂದ ಸಾವಿರಾರು ರೂಪಾಯಿ ನಗದು ದೋಚಿದ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.

ಗ್ಯಾಸ್ ಕಟ್ಟರ್ ಬಳಸಿ ಮುಂಭಾಗದ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯ ಬೀಗ ಮುರಿದು ಅದರಲ್ಲಿದ್ದ ಸುಮಾರು 20ರಿಂದ 25 ಸಾವಿರ ರೂಪಾಯಿ ನೋಟುಗಳನ್ನಷ್ಟೇ ದೋಚಿದ್ದಲ್ಲದೆ, ಗರಡಿಯ ಅರ್ಚಕ ಗುರುರಾಜ್ ಪೂಜಾರಿಯವರು ಗರಡಿಯಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್‌ನಲ್ಲಿರಿಸಿದ್ದ ಸುಮಾರು 15 ಸಾವಿರ ನಗದನ್ನೂ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ರಾತ್ರಿ ಸುರಿದ ಮಳೆಯ ಕಾರಣ ಗ್ಯಾಸ್ ಕಟ್ಟರ್ ಬಳಸಿ ಬೀಗ ಮುರಿಯುವಾಗ ಪಕ್ಕದ ಮನೆಯವರಿಗೂ ಶಬ್ದ ಕೇಳಿಸಿರಲಿಲ್ಲ. ಅರ್ಚಕ ಗುರುರಾಜ್ ಪೂಜಾರಿಯವರು ಬೆಳಿಗ್ಗೆ 5.30 ಗಂಟೆಗೆ ಪೂಜೆಯ ಸಲುವಾಗಿ ಗರಡಿಗೆ ಆಗಮಿಸಿದಾಗಲೇ ಘಟನೆ ಬೆಳಕಿಗೆ ಬಂದಿತ್ತು. ಅವರು ಬರುವಾಗ ಕಳ್ಳರು ಗರಡಿಯ ಲೈಟ್ ಉರಿಸಿದ್ದು ಹಾಗೆಯೇ ಉಳಿದಿತ್ತು ಎಂದು ದೂರಲಾಗಿದೆ.

ಗುರುರಾಜ ಪೂಜಾರಿಯವರ ಬ್ಯಾಗ್‌ನಲ್ಲಿ ಬೆಳ್ಳಿಯ ಆಭರಣಗಳಿದ್ದರೂ ಅದನ್ನು ಅಥವಾ ಗರ್ಭಗುಡಿಯೊಳಗಿದ್ದ ಬೆಲೆಬಾಳುವ ಸಾಮಗ್ರಿಗಳನ್ನು ದೋಚಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಾಪು ನಿರೀಕ್ಷಕ ಹಾಲಮೂರ್ತಿ ರಾವ್, ಪಡುಬಿದ್ರೆ ಠಾಣಾಧಿಕಾರಿ ಸತೀಶ್ ಎಮ್.ಪಿ. ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News