ಕಳವು ಆರೋಪಿಯ ಸೆರೆ: ಸೊತ್ತುಗಳು ವಶಕ್ಕೆ
ಮಂಗಳೂರು, ಸೆ. 17: ಕುಂಟಿಕಾನ ಸಮೀಪದ ಹೊಟೇಲೊಂದರ ಬಳಿ ಪಾರ್ಕ್ ಮಾಡಿದ್ದ ಸ್ಕೂಟರ್‌ನಿಂದ ಐಪಾಡ್ ಸೇರಿದಂತೆ ಇತರ ದಾಖಲೆಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉರ್ವ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ನಗರದ ಬಾರೆಬೈಲ್ ನಿವಾಸಿ ಕೌಶಿಕ್ ಶೆಟ್ಟಿ (23) ಎಂದು ಗುರುತಿಸಲಾಗಿದೆ. ಈತನಿಂದ ಕಳವು ಮಾಡಿದ್ದ ಐಪಾಡ್ ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ರವಿವಾರ ಕೊಟ್ಟಾರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿಕೊಂಡು ಬಂದ ಈತನನ್ನು ತಡೆದು ನಿಲ್ಲಿಸಿ ವಿಚಾರಣೆಗೊಳಪಡಿಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಹಲವು ಬೈಕ್‌ಗಳಿಂದ ಲೈಸೆನ್ಸ್, ಆರ್‌ಸಿ ಮೊದಲಾದ ಸೊತ್ತುಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣೇಶ್ ಪ್ರಸಾದ್ ಎಂಬವರು ಶನಿವಾರ ಬೆಳಗ್ಗೆ ತನ್ನ ದ್ವಿಚಕ್ರ ವಾಹನವನ್ನು ಕುಂಟಿಕಾನ ಎ.ಜೆ ಆಸ್ಪತ್ರೆ ಎದುರಿನಲ್ಲಿರುವ ಹೊಟೇಲ್‌ನ ಪಾರ್ಕಿಂಗ್ ಜಾಗದಲ್ಲಿ ವಾಹನವನ್ನು ಪಾರ್ಕ್ ಮಾಡಿದ್ದರು. ಹೊಟೇಲ್‌ನಲ್ಲಿ ಉಪಹಾರ ಮುಗಿಸಿ ಮರಳಿ ಬಂದಾಗ ಅದರ ಸೀಟ್ ಓಪನ್ ಆಗಿ ಡಿಕ್ಕಿಯಲ್ಲಿರಿಸಿದ್ದ ಆಪಲ್ ಕಂಪೆನಿಯ ಐಪಾಡ್, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಡ್ರೈವಿಂಗ್ ಲೈಸೆನ್ಸ್ ಜೆರಾಕ್ಸ್ ಪ್ರತಿ ಕಳವಾಗಿತ್ತು. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಪರಾಧ ವಿಭಾಗದ ಪಿಎಸ್‌ಐ ಬಾಬು ಬಂಗೇರ, ಎಎಸ್‌ಐ ಬಾಲಕೃಷ್ಣ, ಸಿಬ್ಬಂದಿಗಳಾದ ಸಂತೋಷ್ ಸಸಿಹಿತ್ಲು, ಸಂತೋಷ್, ಸಿದ್ದಾರ್ಥ ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಸೆ.28 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.