ಮಳೆ, ನೆರೆಯಿಂದ ರೊಹಿಂಗ್ಯಾಗಳ ಯಾತನೆ ಉಲ್ಬಣ
ಉಕಿಯಾ (ಬಾಂಗ್ಲಾ),ಸೆ.17: ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಭಾರೀ ನೆರೆ ಮ್ಯಾನ್ಮಾರ್‌ನ ರಾಖೈನ್ ಪ್ರಾಂತದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಬಾಂಗ್ಲಾಕ್ಕೆ ಪಲಾಯನಗೈದಿರುವ ಸಾವಿರಾರು ರೊಹಿಂಗ್ಯಾ ಮುಸ್ಲಿಮರ ಯಾತನೆಗಳನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ರೊಹಿಂಗ್ಯಾ ಮುಸ್ಲಿಮರು ಆಶ್ರಯಪಡೆದಿರುವ ಕಾಕ್ಸ್‌ಬಜಾರ್‌ನ ತಾತ್ಕಾಲಿಕ ವಸತಿ ಶಿಬಿರಗಳಲ್ಲಿ ಮಳೆಯಿಂದಾಗಿ ಕೆಸರು,ಕೊಚ್ಚೆ ತುಂಬಿಕೊಂಡಿದ್ದು,ಅಲ್ಲಿ ವಾಸಿಸುವುದಕ್ಕೆ ಅಸಾಧ್ಯವಾದಂತಹ ಪರಿಸ್ಥಿತಿಯುಂಟಾಗಿದೆ.
ಕಳೆದ 24 ತಾಸುಗಳಲ್ಲಿ ಕಾಕ್ಸ್‌ಬಝಾರ್ ಪ್ರದೇಶದಲ್ಲಿ 7.7 ಸೆಂ.ಮೀ. ಮಳೆಯಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆಯಿರುವುದಾಗಿ ಬಾಂಗ್ಲಾ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.
ಪ್ರವಾಹದ ಹಿನ್ನೆಲೆಯಲ್ಲಿ ರೊಹಿಂಗ್ಯಾ ನಿರಾಶ್ರಿತರನ್ನು ಹೊಸ ತಾಣಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ರೊಹಿಂಗ್ಯಾಗಳ ವಿರುದ್ಧ ಈಗಾಗಲೇ ಪ್ರವಾಸಿ ನಿರ್ಬಂಧಗಳನ್ನು ವಿಧಿಸಿರುವ ಬಾಂಗ್ಲಾ ಅಧಿಕಾರಿಗಳು ರಸ್ತೆ ಬದಿಯ ನಿರಾಶ್ರಿತ ಶಿಬಿರಗಳಲ್ಲಿದ್ದ ರೊಹಿಂಗ್ಯಾಗಳನ್ನು ನೂತನ ಶಿಬಿರಕ್ಕೆ ಸ್ಥಳಾಂತರಿಸುತ್ತಿದ್ದಾರೆ.
ರಾಖೈನ್ ಪ್ರಾಂತದಲ್ಲಿ ಮ್ಯಾನ್ಮಾರ್ ಸೇನೆಯು ಬಂಡುಕೋರರ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿದ ಬಳಿಕ ತಾಂಡವವಾಡುತ್ತಿರುವ ಹಿಂಸಾಚಾರಕ್ಕೆ ನೂರಾರು ರೊಹಿಂಗ್ಯಾಗಳು ಬಲಿಯಾಗಿದ್ದು, 4.9 ಲಕ್ಷ ಮಂದಿ ನೆರೆಯ ಬಾಂಗ್ಲಾ ದೇಶಕ್ಕೆ ಪಲಾಯನಗೈದಿದ್ದಾರೆಂದು ವಿಶ್ವಸಂಸ್ಥೆ ತಿಳಿಸಿದೆ.
ಶನಿವಾರದಂದು ಬಾಂಗ್ಲಾ ಪೊಲೀಸರು ರೊಹಿಂಗ್ಯಾಗಳು ತಮ್ಮ ನಿಯೋಜಿತ ಸ್ಥಳದಿಂದ ಹೊರತೆರಳುವುದನ್ನು ನಿಷೇಧಿಸಿ ಹೊಸ ಆದೇಶ ಹೊರಡಿಸಿದ್ದಾರೆ. ಸ್ನೇಹಿತರು ಹಾಗೂ ಬಂಧುಗಳ ನಿವಾಸದಲ್ಲಿ ಆಶ್ರಯ ಪಡೆಯುವುದನ್ನು ಕೂಡಾ ಈ ಆದೇಶವು ತಡೆಗಟ್ಟಿದೆ.
ಪ್ರತಿದಿನವೂ ಮ್ಯಾನ್ಮಾರ್‌ನಿಂದ ರೊಹಿಂಗ್ಯಾ ನಿರಾಶ್ರಿತರು ಗುಳೆಬರುತ್ತಿದ್ದು, ನಿರಾಶ್ರಿತರು ದೇಶಾದ್ಯಂತ ಇತರ ಪಟ್ಟಣ ಹಾಗೂ ನಗರಗಳಿಗೂ ಚದುರಿಹೋಗುವ ಸಾಧ್ಯತೆಯಿದೆಯೆಂದು ಬಾಂಗ್ಲಾ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.