ಬೆಳ್ತಂಗಡಿ: ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ವಿದ್ಯಾರ್ಥಿ ವೇತನ ವಿತರಣೆ
ಬೆಳ್ತಂಗಡಿ, ಸೆ. 17: ಆಧುನಿಕ ಯುಗದ ಪ್ರಸ್ತುತ ಶಿಕ್ಷಣ ಪದ್ದತಿ ವ್ಯಾಪಾರೀಕರಣವಾಗುತ್ತಿದೆ. ಪೋಷಕರು ಇದಕ್ಕೆ ಮರುಳಾಗದೆ ಮಕ್ಕಳಿಗೆ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆಯಂತೆ ಸಂಸ್ಕಾರಯುತ, ಭವಿಷ್ಯ ರೂಪಿಸುವ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೊಟ್ಯಾನ್ ಹೇಳಿದರು.
ಅವರು ರವಿವಾರ ಬೆಳ್ತಂಗಡಿ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬೆಳ್ತಂಗಡಿ ಇದರ ಸಂಯುಕ್ತ ಅಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು 163ನೇ ಗುರು ಜಯಂತಿ, ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ನಾರಾಯಣಗುರುಗಳು ಸಮಾಜದಲ್ಲಿ ಆಗುತ್ತಿರುವ ದೌರ್ಜನ್ಯ, ಕೀಳರಿಮೆ ನೋಡಲಾಗದೆ ಸುಮಾರು 150 ವರ್ಷಗಳ ಹಿಂದೆಯೇ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಜಗತ್ತಿಗೆ ಸಂದೇಶ ಸಾರಿದವರು ಎಂದರು.
ರಾಜ್ಯಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಗೀರಥ ಜಿ. ಅವರು, ಬೆಳ್ತಂಗಡಿ ಬಿಲ್ಲವ ಸಮಾಜ ಸಂಘಟನೆಗಳಲ್ಲಿ ಇಡೀ ಜಿಲ್ಲೆಗೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಸಂಘಟನೆಗಳನ್ನು ಬೆಳೆಸಿ ಬಿಲ್ಲವ ಸಮಾಜದ ಕಟ್ಟಕಡೆಯ ಕುಟುಂಬಗಳನ್ನು ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕು. ಸಮಾಜದ ಸಂಘಟನೆಯಲ್ಲಿ ರಾಜಕೀಯ ಬರಬಾರದು. ಸಮಾಜದ ಅಭಿವೃದ್ಧಿಯನ್ನು ಪ್ರಚಾರದ ದೃಷ್ಟಿಯಿಂದ ನೋಡದೆ ಮುಕ್ತ ಮನಸ್ಸಿನಿಂದ ಮಾಡಲು ಶ್ರಮಿಸಬೇಕು ಎಂದರು.
ಸಂಘದ ಮಾಜಿ ಅಧ್ಯಕ್ಷರಾದ ಕೆ. ವಸಂತ ಸಾಲಿಯಾನ್, ಪಿ. ಕೆ. ರಾಜು ಪೂಜಾರಿ ಮಾತನಾಡಿ ಶುಭ ಹಾರೈಸಿದರು. ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ತನುಜಾ ಶೇಖರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ಕಾಶಿಪಟ್ನ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮನೋಹರ್ ಬಳಂಜ ಇವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ ಸ್ವಾಗತಿಸಿ, ನಿರ್ದೇಶಕ ಸೋಮನಾಥ ಬಂಗೇರ ವರ್ಪಾಳೆ ಪ್ರಸ್ತಾಪಿಸಿದರು. ವಸಂತ ಪುದುವೆಟ್ಟು ಸನ್ಮಾನಿತರ ಪರಿಚಯಿಸಿದರು. ಸುಧಾ ರಮಾನಂದ, ಸ್ಮಿತೇಶ್ ಕಾರ್ಯಕ್ರಮ ನಿರೂಪಿಸಿ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಚಿದಾನಂದ ಇಡ್ಯ ವಂದಿಸಿದರು.