ಅಪಹೃತ ಭಾರತೀಯರ ಮಾಹಿತಿಯಿಲ್ಲ: ಇರಾಕ್ ಪ್ರಧಾನಿ
ಬಗ್ದಾದ್,ಸೆ.17: ಶಂಕಿತ ಐಸಿಸ್ ಉಗ್ರರ ಒತ್ತೆಸೆರೆಯಲ್ಲಿದ್ದಾರೆನ್ನಲಾದ 39 ಭಾರತೀಯರ ಗತಿ ಏನಾಗಿದೆಯೆಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲವೆಂದು ಇರಾಕ್ ಪ್ರಧಾನಿ ಹೈದರ್ ಅಲ್ ಅಬಾದಿ ತಿಳಿಸಿದ್ದಾರೆ. ಮೂರು ವರ್ಷಗಳ ಹಿಂದೆ ಐಸಿಸ್ ಉಗ್ರರು ಮೊಸುಲ್ ನಗರವನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಈ ಭಾರತೀಯನ್ನು ಅವರು ಒತ್ತೆಸೆರೆಯಲ್ಲಿಟ್ಟಿದ್ದರು.
‘‘ನಾಪತ್ತೆಯಾದ ಭಾರತೀಯರ ಬಗ್ಗೆ ಈಗಲೂ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಇನ್ನು ಹೆಚ್ಚಿನ ಪ್ರತಿಕ್ರಿಯೆ ನೀಡಲು ನನಗೆ ಸಾಧ್ಯವಾಗದು ’’ ಎಂದು ಅಲ್ ಅಬಾದಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಒತ್ತೆಸೆರೆಯಲ್ಲಿರುವ ಭಾರತೀಯರು, ಪ್ರಸ್ತುತ ಇರಾಕಿ ಪಡೆಗಳು ಐಸಿಸ್‌ನಿಂದ ಮರುಸ್ವಾಧೀನಪಡಿಸಿಕೊಂಡಿರುವ ವಾಯುವ್ಯ ಮೊಸುಲ್ ನಗರದ ಬಾದುಶ್‌ನಲ್ಲಿರುವ ಕಾರಾಗೃಹವೊಂದರಲ್ಲಿ ಬಂಧಿಯಾಗಿರಬಹುದೆಂದು ಅವರ ಬಂಧುಗಳಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಳೆದ ಜುಲೈನಲ್ಲಿ ತಿಳಿಸಿದ್ದರು.
ಅಪಹೃತ ಕಾರ್ಮಿಕರಲ್ಲಿ ಬಹುತೇಕ ಮಂದಿ ಉತ್ತರ ಭಾರತದವರಾಗಿದ್ದು ಅವರೆಲ್ಲರೂ ಇರಾಕಿ ಕಟ್ಟಡ ನಿರ್ಮಾಣ ಕಂಪೆನಿಯೊಂದರ ಉದ್ಯೋಗಿಗಳಾಗಿದ್ದಾರೆ. 2014ರಲ್ಲಿ ಇರಾಕ್‌ನ ಉತ್ತರ ಹಾಗೂ ಪಶ್ಚಿಮ ಪ್ರಾಂತವನ್ನು ಐಸಿಸ್ ಆಕ್ರಮಿಸುವ ಮುನ್ನ ಸಾವಿರಾರು ಭಾರತೀಯರು ಅಲ್ಲಿ ಉದ್ಯೋಗದಲ್ಲಿದ್ದರು.
ಸುಮಾರು 9 ತಿಂಗಳುಗಳ ಸುದೀರ್ಘ ಕದನದ ಬಳಿಕ ಇರಾಕಿ ಪಡೆಗಳು ಕಳೆದ ಜುಲೈನಲ್ಲಿ ಮೊಸುಲ್ ನಗರವನ್ನು ವಶಪಡಿಸಿಕೊಂಡಿದ್ದವು.