×
Ad

ಮಿಲಿಟರಿ ಶಕ್ತಿಯಲ್ಲಿ ಅಮೆರಿಕವನ್ನು ಸರಿಗಟ್ಟುವುದೇ ಉ.ಕೊರಿಯದ ಗುರಿ: ಕಿಮ್‌ಜಾಂಗ್ ಘೋಷಣೆ

Update: 2017-09-17 23:23 IST

ವೊಂಗ್‌ಯ್ಯಂಗ್,ಸೆ.17: ಮಿಲಿಟರಿ ಶಕ್ತಿಯಲ್ಲಿ ಅಮೆರಿಕಕ್ಕೆ ಸರಿಸಮಾನವಾಗುವ ತನ್ನ ಗುರಿಗೆ ಉತ್ತರ ಕೊರಿಯ ಸನಿಹವಾಗುತ್ತಿದೆಯೆಂದು ಆ ದೇಶದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಶನಿವಾರ ಘೋಷಿಸಿದ್ದಾರೆ. ಜಪಾನ್‌ನ ದ್ವೀಪದ ಸಮೀಪ ಶುಕ್ರವಾರ ಉತ್ತರ ಕೊರಿಯ ಪ್ರಕ್ಷೇಪಕ ಕ್ಷಿಪಣಿಯನ್ನು ಎಸೆದ ಬೆನ್ನಲ್ಲೇ ಕಿಮ್‌ ಜಾಂಗ್ ಈ ಹೇಳಿಕೆ ನೀಡಿದ್ದಾರೆ. ಪೂರ್ಣ ಪ್ರಮಾಣದ ಯುದ್ಧ ನಡೆದಲ್ಲಿ ಅದಕ್ಕೆ ಸಿದ್ಧವಾಗುವ ಉದ್ದೇಶದಿಂದ ತನ್ನ ದೇಶವು ಅಣ್ವಸ್ತ್ರಗಳನ್ನು ವಿನ್ಯಾಸಗೊಳಿಸುತ್ತಿದೆಯೆಂಬ ಸೂಚನೆಯನ್ನು ಕೂಡಾ ಅವರು ನೀಡಿದ್ದಾರೆ.

 ಸೈನಿಕಶಕ್ತಿಯಲ್ಲಿ ತನ್ನ ದೇಶವು ಅಮೆರಿಕವನ್ನು ಮೀರಿಸುವಂತಹ ಗುರಿಯನ್ನು ಹೊಂದಿರುವುದಾಗಿ ಕಿಮ್ ಜಾಂಗ್ ಹೇಳಿರುವುದಾಗಿ ಉತ್ತರ ಕೊರಿಯದ ವಾರ್ತಾ ಸಂಸ್ಥೆಯೊಂದು ವರದಿ ಮಾಡಿದೆ. ಜಪಾನ್ ದ್ವೀಪದಾಚೆಗೆ ಶುಕ್ರವಾರ ನಡೆದ ಕ್ಷಿಪಣಿ ಪ್ರಯೋಗ ಯಶಸ್ವಿಯಾಗಿರುವುದಾಗಿ ಸಂಭ್ರಮ ವ್ಯಕ್ತಪಡಿಸಿದ ಅವರು, ತನ್ನ ದೇಶದ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಇದು ಸಾಬೀತುಪಡಿಸಿದೆ ಎಂದರು. ಉತ್ತರ ಕೊರಿಯದ ವಿರುದ್ಧ ಹೇರಲಾದ ಅಂತಾರಾಷ್ಟ್ರೀಯ ನಿರ್ಬಂಧಗಳ ಮಧ್ಯೆಯೇ ತಾನು ಅಣ್ವಸ್ತ್ರ ಕಾರ್ಯಕ್ರಮವನ್ನು ಪೂರ್ಣಗೊಳಿಸುವುದಾಗಿ ಅವರು ಪ್ರತಿಜ್ಞೆಗೈದಿರುವುದಾಗಿ ಸುದ್ದಿಸಂಸ್ಥೆ ತಿಳಿಸಿದೆ.

    ಜಪಾನ್ ಮೇಲೆ ಕ್ಷಿಪಣಿಯನ್ನು ಹಾರಿಸುವ ಮೂಲಕ ಉತ್ತರ ಕೊರಿಯ ಪ್ರಾದೇಶಿಕ ಶಾಂತಿ ಹಾಗೂ ಭದ್ರತೆಯನ್ನು ಕಡೆಗಣಿಸಿದೆಯೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಆರೋಪಿಸಿದೆ. ವ್ಯೊಂಗ್‌ಯಾಂಗ್‌ನ ಕ್ಷಿಪಣಿ ಪರೀಕ್ಷೆಗಳು ಜಗತ್ತಿನಾದ್ಯಂತ ಗಂಭೀರವಾದ ಭದ್ರತಾ ಆತಂಕವನ್ನು ಸೃಷ್ಟಿಸಿದೆ ಹಾಗೂ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಿಗೆ ಬೆದರಿಕೆಯುಂಟು ಮಾಡಿದೆಯೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News