ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಕಾರ್ಯಕ್ರಮಗಳು
ಉಡುಪಿ, ಸೆ.18: ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿದ್ದು, ಸಾಂಬಾರು ಬೆಳೆಗಳ ಉತ್ಪಾದನೆ ಹೆಚ್ಚಳ, ಉತ್ಪಾದಕತೆಯಲ್ಲಿ ಅಭಿವೃದ್ಧಿ, ಗುಣಮಟ್ಟದ ಉತ್ಪಾದನೆ, ಉತ್ಪನ್ನಗಳ ವೌಲ್ಯವರ್ಧನೆ ಹಾಗೂ ಮಾರುಕಟ್ಟೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ನಿಗಮದಿಂದ ಸಾಂಬಾರು ಬೆಳೆಗಾರರಿಗೆ ಉತ್ತೇಜನ ನೀಡಲು 2017-18ನೇ ಸಾಲಿನಲ್ಲಿ ಫಲಾನುಭವಿ ಆಧಾರಿತ ಪ್ರಾಥಮಿಕ ಸಂಸ್ಕರಣೆ, ಯಾಂತ್ರೀಕರಣ, ಟಾರ್ಪಲಿನ್ ವಿತರಣೆ, ರೈತರಿಗೆ ತರಬೇತಿ ಹಾಗೂ ಪ್ರದರ್ಶನ ಮತ್ತು ಮೇಳ ಕಾರ್ಯಕ್ರಮಳನ್ನು ಹಮ್ಮಿಕೊಳ್ಳಲಾಗುವುದು.
ಪ್ರಾಥಮಿಕ ಸಂಸ್ಸರಣಾ ಘಟಕದಡಿ ವಿವಿಧ ಘಟಕಗಳಾದ ಸಂಚಾರಿ ಅರಿಷಿಣ ಸಂಸ್ಕರಣಾ ಘಟಕ (ಅರಷಿಣ ಕುದಿಸುವ ಯಂತ್ರ ಮತ್ತು ಪಾಲಿಷಿಂಗ್ ಮಿಷಿನ್), ಶುಂಠಿ ಸಂಸ್ಕರಣಾ ಘಟಕ, ಕಾಳುಮೆಣಸು ಸಂಸ್ಕರಣಾ ಘಟಕ, ಹುಣಸೆ ಸಂಸ್ಕರಣಾ ಘಟಕಗಳಿಗೆ 25 ಲಕ್ಷ ರೂ.ಗಳ ಘಟಕ ವೆಚ್ಚಕ್ಕೆ ಶೇ.40 ರಂತೆ ಗರಿಷ್ಠ 10ಲಕ್ಷ ರೂ.ಗಳ ಸಹಾಯಧನವನ್ನು ನೀಡಲಾಗುವುದು. ಈ ಕಾರ್ಯಕ್ರಮದಡಿ ಸಹಾಯಧನ ಪಡೆಯುವ ರೈತರು ಸಾಂಬಾರು ಬೆಳೆ ಬೆಳೆಯುವ ರೈತರಾಗಿರಬೇಕು, ಘಟಕ ನಿರ್ಮಾಣಕ್ಕೆ ರಾಷ್ಟ್ರಿಕೃತ ಬ್ಯಾಂಕ್‌ನಿಂದ ಸಾಲ ಪಡೆಯುವುದು ಕಡ್ಡಾಯವಾಗಿದೆ.
ಯಾಂತ್ರೀಕರಣ ಕಾರ್ಯಕ್ರಮದಡಿ ವಿವಿಧ ಯಂತ್ರೋಪಕರಣಗಳಾದ ಅಲ್ಯುಮಿನಿಯಮಂ ಲ್ಯಾಡರ್, ಕಾಳುಮೆಣಸು ಬಿಡಿಸುವ ಯಂತ್ರ, ಪವರ್ ಸ್ಪ್ರೇಯರ್, ಪವರ್ ವೀಡರ್ ಇತ್ಯಾದಿ ಯಂತ್ರೋಪಕರಣಗಳಿಗೆ ಎಸ್‌ಎಂಎಎಂ ಅನುಷ್ಠಾನ ಮಾರ್ಗಸೂಚಿಯನ್ವಯ ಸಹಾಯಧನ ವಿತರಿಸಲಾಗುವುದು. ಸಾಮಾನ್ಯ ವರ್ಗಕ್ಕೆ ಉಪಕರಣ ದರದ ಶೇ.40ರಂತೆ ಗರಿಷ್ಟ 50,000 ರೂ. ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮತ್ತು ಮಹಿಳಾ ರೈತರಿಗೆ ಶೇ.50 ರಂತೆ ಗರಿಷ್ಟ 62,500 ರೂ. ಸಹಾಯಧನ ನೀಡಲಾಗುವುದು.
ಸಾಂಬಾರು ಬೆಳೆ ಬೆಳೆಯುವ ರೈತರಿಗೆ ಸಾಂಬಾರು ಬೆಳೆಯ ತಾಂತ್ರಿಕ ಬೇಸಾಯ ಕ್ರಮವನ್ನು ತೋಟಗಾರಿಕೆ ವಿವಿಯ ನುರಿತ ವಿಜ್ಞಾನಿಗಳ ವುೂಲಕ ತರಬೇತಿ ನೀಡಲಾಗುವುದು. ರಾಜ್ಯದಲ್ಲಿ ಬೆಳೆಯುವ ಪ್ರಮುಖ ಸಾಂಬಾರು ಬೆಳೆಗಳ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ, ವಹಿವಾಟು ಉತ್ತೇಜನ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಸಾಂಬಾರು ಬೆಳೆ ಉತ್ಪನ್ನಗಳ ಪ್ರದರ್ಶನ ಮತ್ತು ಮೇಳಗಳನ್ನು ಏರ್ಪಡಿಸಲಾಗುವುದು. ಎಂದು ಪ್ರಕಟಣೆ ತಿಳಿಸಿದೆ.