ಎಸ್ಸೈಗೆ ಬಹಿರಂಗ ಬೆದರಿಕೆ ಹಾಕಿ, “ಪುತ್ತೂರನ್ನು ಸುರತ್ಕಲ್ ಆಗಿ ಮಾಡುತ್ತೇವೆ” ಎಂದ ಜಗದೀಶ್ ಕಾರಂತ್!
ಇದು ಕೋಮು ಪ್ರಚೋದನೆಯಲ್ಲವೇ ?: ನಾಗರಿಕರ ಪ್ರಶ್ನೆ
ಪುತ್ತೂರು, ಸೆ.18: ಪುತ್ತೂರಿನಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಸೆ.15ರಂದು ಹಿಂದೂ ಜಾಗರಣ ವೇದಿಕೆ ನಡೆಸಿದ ಪ್ರತಿಭಟನೆಯಲ್ಲಿ ಹಿಂಜಾವೇ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಅತ್ಯಂತ ಪ್ರಚೋದನಕಾರಿ ಭಾಷಣ ಮಾಡಿ ಮೂರು ದಿನಗಳ ಬಳಿಕವೂ ಪೊಲೀಸ್ ಇಲಾಖೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಜನರಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.
ಸಂಪ್ಯ ಠಾಣಾ ಎಸ್.ಐ. ಖಾದರ್, ಪೊಲೀಸ್ ಸಿಬ್ಬಂದಿಗಳಾದ ಎಎಸ್ಸೈ ರುಕ್ಮಾ ಮತ್ತು ಚಂದ್ರ ಅವರು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಪುತ್ತೂರು ಕಿಲ್ಲೆ ಮೈದಾನದಲ್ಲಿ ಶುಕ್ರವಾರ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಜಗದೀಶ್ ಕಾರಂತ್ ಗಲಭೆ ನಡೆಸುವ ಬಹಿರಂಗ ಬೆದರಿಕೆ ಹಾಕಿದ್ದರು. ಎಸ್ಸೈಗೆ ಅಶ್ಲೀಲ ಪದಗಳಿಂದ ನಿಂದಿಸಿ, ಅವರನ್ನು ಕತ್ತೆಯ ಮೇಲೆ ಬೆತ್ತಲೆ ಮೆರವಣಿಗೆ ಮಾಡುವುದಾಗಿ ಬಹಿರಂಗ ಬೆದರಿಕೆ ಒಡ್ಡಿದ್ದರು. ನಮಗೆ ಯಾವುದೇ ಕಾನೂನಿನ ಭಯವಿಲ್ಲ ಎಂದು ಹೇಳಿದ್ದರು. ಆದರೆ ಇಷ್ಟೊಂದು ಪ್ರಚೋದನಕಾರಿ ಭಾಷಣ ಮಾಡಿದ್ದರೂ ಕಾರಂತ್ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂದು ಪುತ್ತೂರಿನ ಜನತೆ ಪ್ರಶ್ನಿಸುತ್ತಿದ್ದಾರೆ.
ಪುತ್ತೂರಲ್ಲಿ ಕೋಮು ಗಲಭೆಗೆ ಹುನ್ನಾರ: ಜಗದೀಶ್ ಕಾರಂತ್ ಈವರೆಗೆ ಜಿಲ್ಲೆಯಲ್ಲಿ ಹಲವೆಡೆ ಪ್ರಚೋದನಕಾರಿ ಭಾಷಣಗಳ ಮೂಲಕ ಶಾಂತಿ ಕದಡಿದ ನಿದರ್ಶನಗಳಿವೆ. 9 ಜೀವಗಳನ್ನು ಬಲಿ ಪಡೆದ 1998 - 99ರ ಸುರತ್ಕಲ್ ಗಲಭೆ ನಡೆಯಲು ಅದಕ್ಕೆ ಕೆಲವೇ ದಿನಗಳ ಮೊದಲು ನಡೆದ ಜಗದೀಶ್ ಕಾರಂತ್ ಭಾಷಣವೇ ಮುಖ್ಯ ಕಾರಣ ಎಂದು ಸುರತ್ಕಲ್ ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇದೀಗ ಅದೇ ಕಾರಂತ್ ಮೊದಲೇ ಕೋಮು ಸೂಕ್ಷ ಪ್ರದೇಶವಾಗಿರುವ ಪುತ್ತೂರಿಗೆ ಬಂದು "ಪುತ್ತೂರನ್ನು ಹಳೆ ಸುರತ್ಕಲ್ ಮಾಡುತ್ತೇನೆ" ಎಂದು ಸಾರ್ವಜನಿಕ ವೇದಿಕೆಯಲ್ಲೇ ಬೆದರಿಕೆ ಹಾಕಿದ್ದಾರೆ. ಆದರೆ ಪೊಲೀಸ್ ಇಲಾಖೆ ಮಾತ್ರ ಈವರೆಗೂ ಈ ಬಗ್ಗೆ ತಲೆಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ. ಈಗಷ್ಟೇ ಬಂಟ್ವಾಳದಲ್ಲಿ ಕೋಮು ಹಿಂಸೆ ನಿಯಂತ್ರಣಕ್ಕೆ ಬಂದಿದೆ. ಹೀಗಿರುವಾಗ ಪಕ್ಕದ ಪುತ್ತೂರಿಗೆ ಬಂದು ಕಾರಂತ್ ಹೀಗೆ ಮಾತನಾಡಿದಾಗ ತಕ್ಷಣ ಅವರ ವಿರುದ್ಧ ಕ್ರಮ ಕೈಗೊಂಡು ಇಂತಹ ಶಕ್ತಿಗಳಿಗೆ ಸೂಕ್ತ ಸಂದೇಶ ಏಕೆ ರವಾನಿಸುತ್ತಿಲ್ಲ ಎಂಬುದು ಜಿಲ್ಲೆಯ ಪ್ರಜ್ಞಾವಂತ ಜನರ ಪ್ರಶ್ನೆಯಾಗಿದೆ .
ಸರ್ಕಾರಕ್ಕೇ ಬೆದರಿಕೆ: ಈವರೆಗೆ ನಿರ್ದಿಷ್ಟ ಸಮುದಾಯವನ್ನು, ಸಂಘಟನೆಗಳನ್ನು ದೂರುತ್ತಿದ್ದ, ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ಜಗದೀಶ್ ಕಾರಂತ್ ಈಗ ನೇರವಾಗಿ ಸರ್ಕಾರಕ್ಕೇ ಬೆದರಿಕೆ ಹಾಕಿದ್ದಾರೆ. ನಿರ್ದಿಷ್ಟ ಅಧಿಕಾರಿ ತನ್ನ ಕರ್ತವ್ಯ ನಿರ್ವಹಿಸಿದ್ದನ್ನೇ ಪ್ರಶ್ನಿಸಿದ್ದಾರೆ. "ಆತನನ್ನು ಇಲ್ಲಿರಲು ಬಿಡುವುದಿಲ್ಲ" ಎಂದು ಸವಾಲು ಹಾಕಿದ್ದಾರೆ. ಇದು ಜಿಲ್ಲೆಯ ಪೊಲೀಸ್ ಇಲಾಖೆಗೆ ನೇರವಾಗಿ ಹಾಕಿರುವ ಸವಾಲು. ತಮ್ಮ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೇ ಹೀಗೆ ಸಾರ್ವಜನಿಕವಾಗಿ ಬೆದರಿಕೆ ಹಾಕುವವರನ್ನು ಇಲಾಖೆ ಹೇಗೆ ಸಹಿಸಿಕೊಂಡಿದೆ ?, ಇಂತಹವರ ವಿರುದ್ಧ ಕ್ರಮಕ್ಕೆ ಏಕೆ ಹಿಂಜರಿಕೆ ?, ಹೀಗಾದರೆ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವುದು ಹೇಗೆ ? ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್: ಕಾರಂತ್ ಮಾಡಿರುವ ಪ್ರಚೋದನಕಾರಿ ಭಾಷಣದ ತುಣುಕುಗಳು ವಾಟ್ಸ್ ಆಪ್ ನಲ್ಲಿ ವೈರಲ್ ಆಗಿವೆ. ಅದರಲ್ಲಿರುವ ಹೇಳಿಕೆಗಳಿಂದ ಸಮಾಜದ ಶಾಂತಿ ಕದಡುವ, ಹಿಂಸೆಗೆ ಯುವಜನರನ್ನು ಪ್ರೇರೇಪಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಈ ಬಗ್ಗೆ ಜಿಲ್ಲೆಯ ಪೊಲೀಸ್ ಇಲಾಖೆ ಮಾತ್ರ ಇನ್ನೂ ಗಮನ ಹರಿಸಿಲ್ಲ.
ನಮಗೆ ದೂರು ಬಂದಿಲ್ಲ, ನಾವು ಪ್ರಕರಣ ದಾಖಲಿಸಿಲ್ಲ: ಮಹೇಶ್ ಪ್ರಸಾದ್
ಜಗದೀಶ್ ಕಾರಂತ್ ಪ್ರಚೋದನಕಾರಿ ಭಾಷಣದ ಕುರಿತು ಯಾವ ಕ್ರಮ ಕೈಗೊಂಡಿದ್ದೀರಿ ಎಂಬ ವಾರ್ತಾ ಭಾರತಿ ಪ್ರತಿನಿಧಿಯ ಪ್ರಶ್ನೆಗೆ "ನಮಗೆ ದೂರು ಬಂದಿಲ್ಲ. ನಾವು ಪ್ರಕರಣ ದಾಖಲಿಸಿಲ್ಲ" ಎಂದು ಪುತ್ತೂರು ಸರ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಉತ್ತರಿಸಿದ್ದಾರೆ. ನೀವು ಸ್ವಯಂಪ್ರೇರಿತ ದೂರು ದಾಖಲಿಸುತ್ತೀರಾ ಎಂದು ಕೇಳಿದ್ದಕ್ಕೆ "ನಮಗೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ. ಆದ್ದರಿಂದ ಈವರೆಗೆ ನಾವು ಯಾವುದೇ ಪ್ರಕರಣ ದಾಖಲಿಸಿಲ್ಲ" ಎಂದು ಮತ್ತೆ ಹೇಳಿದರು.
ಕಾನೂನು ರೀತಿಯಲ್ಲಿ ಕ್ರಮ: ಎಸ್ಪಿ
ಹಿಂದೂ ಜಾಗರಣಾ ವೇದಿಕೆಯವರು ಶುಕ್ರವಾರ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಅವರು ಮಾಡಿರುವ ಭಾಷಣಕ್ಕೆ ಸಂಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ದ.ಕ. ಜಿಲ್ಲಾ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. "ಜಗದೀಶ್ ಕಾರಂತ್ ಅವರು ಪೊಲೀಸರ ವಿರುದ್ಧ ಆರೋಪ ಮಾಡಿರುವುದು ಗಮನಕ್ಕೆ ಬಂದಿದೆ. ಕೋಮು ಪ್ರಚೋದನೆ ಉಂಟು ಮಾಡುವ ರೀತಿಯಲ್ಲಿ ಮಾತನಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಕಾನೂನು ರೀತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ" ಅವರು ಪ್ರತಿಕ್ರಿಯೆ ನೀಡಿದ್ದಾರೆ.