ಗೃಹ ಸಚಿವ ರಾಮಲಿಂಗ ರೆಡ್ಡಿಯನ್ನು ಭೇಟಿ ಮಾಡಿದ ಮುಸ್ಲಿಮ್ ಸಂಘಟನೆಗಳ ಒಕ್ಕೂಟ
ಮಂಗಳೂರು, ಸೆ. 18: ಪುತ್ತೂರಿನಲ್ಲಿ ಕೋಮು ಪ್ರಚೋದಕ ಭಾಷಣ ಮಾಡಿ ಶಾಂತಿ ಕದಡಲು ಪ್ರಚೋದಿಸಿದ ಮತ್ತು ಕೋಮುಗಲಭೆಗೆ ಪ್ರೇರೇಪಿಸಿದ ಹಾಗೂ ಪುತ್ತೂರು ನಗರ ಠಾಣೆಯ ಪ್ರಾಮಾಣಿಕ, ಕರ್ತವ್ಯ ನಿಷ್ಟ ಅಧಿಕಾರಿ ಪೊಲೀಸ್ ಇನ್ಸ್ ಪೆಕ್ಟರ್ ಅಬ್ದುಲ್ ಖಾದರ್ ವಿರುದ್ದ ಅವಹೇಳನಕಾರಿಯಾಗಿ ಭಾಷಣ ಮಾಡಿ ಸರಕಾರಿ ಅಧಿಕಾರಿಯ ವಿರುದ್ಧ ಮಾನಹಾನಿಯಾಗುವಂಥಹ ಅಸಭ್ಯ ಪದಗಳನ್ನು ಬಳಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೋಮು ಪ್ರಚೋದಕ ಭಾಷಣ ಮಾಡಿದ ಜಗದೀಶ್ ಕಾರಂತ್ ರ ಮೇಲೆ ಪ್ರಕರಣ ದಾಖಲಿಸಿ, ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೇಂದು ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ವತಿಯಿಂದ ಗೃಹ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಗೃಹ ಸಚಿವ ರಾಮಲಿಂಗ ರೆಡ್ಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರಗಿಸುವ ಭರವಸೆ ನೀಡಿದರು. ನಿಯೋಗದಲ್ಲಿ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ. ಅಶ್ರಫ್, ಹಾರಿಸ್ ಬೈಕಂಪಾಡಿ, ಜಲೀಲ್ ಕೃಷ್ಣಾಪುರ, ಮುಸ್ತಫಾ ಸಿಎಂ., ಮೋನು ಕುದ್ರೋಳಿ,ಶಾಫಿ ಹಾಗೂ ಇತರರು ಉಪಸ್ಥಿತರಿದ್ದರು.