×
Ad

ಪುತ್ತೂರು: ಸೆ.21ರಿಂದ ವಿವೇಕಾನಂದ ಕಾಲೇಜಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ

Update: 2017-09-18 21:24 IST

ಪುತ್ತೂರು, ಸೆ. 18:  ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯುಕ್ತ ಆಶ್ರಯದಲ್ಲಿ ಸಂಶೋಧನಾ ವಿಧಾನಗಳು ಮತ್ತು ‘ಲ್ಯಾಟೆಕ್ಸ್’ ಎನ್ನುವ ಸಾಷ್ಟ್‌ವೇರ್ ವಿಷಯದ ಬಗ್ಗೆ ಮೂರು ದಿನಗಳ ವಿಚಾರ ಸಂಕಿರಣ ಸೆಪ್ಟೆಂಬರ್ 21 ರಿಂದ 23 ರ ವರೆಗೆ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಕೃಷ್ಣ ಚೇತನಾ ಸಭಾಭವನದಲ್ಲಿ ನಡೆಯಲಿದೆ ಎಂದು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಸಂಶೋಧನಾ ವಿಧ್ವಾಂಸರಿಗಾಗಿ ತಯಾರಿಸಲಾದ ಪಠ್ಯಕ್ರಮದಂತೆ ಈ ವಿಚಾರ ಸಂಕಿರಣ ನಡೆಯಲಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಸುಮಾರು 150 ಸಂಶೋಧನಾ ನಿರತರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ವಿಷಯಗಳಲ್ಲಿ ತರಬೇತಿ ಹೊಂದಿದ ಆರು ಮಂದಿ ಪರಿಣತ ಸಂಪನ್ಮೂಲ ವ್ಯಕ್ತಿಗಳು ವಿಚಾರ ಸಂಕಿರಣವನ್ನು ನಡೆಸಿ ಕೊಡಲಿದ್ದಾರೆ ಎಂದರು. 

ಸಂಶೋಧನೆಯ ಮುಖ್ಯ ವಿಷಯಗಳಾದ ಗ್ರಂಥ ಸಮೀಕ್ಷೆ, ಶೈಕ್ಷಣಿಕ ಬರಹಗಳು, ಮೌಖಿಕ ಪ್ರಸ್ತುತಿ, ಕೃತಿಚೌರ್ಯದ ಪರೀಕ್ಷೆ ಮುಂತಾದ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ. ಸಂಶೋಧನಾ ಪ್ರಬಂಧವನ್ನು ತಯಾರಿಸಲು ಬಳಸುವ ಲ್ಯಾಟೆಕ್ಸ್ ವಿಷಯದ ಬಗ್ಗೆ ಪ್ರಾಯೋಗಿಕ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಸೆ. 21ರಂದು ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಕೆ.ಭೈರಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಸೆ. 23 ರಂದು ಸಂಜೆ 3.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ಮಲ್ಲಿಕಾ ಪ್ರಸಾದ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕ ಡಾ.ಮಹೇಶ್.ಕೆ.ಕೆ ಮತ್ತು ಮಾಧ್ಯಮ ಸಂಚಾಲಕ ಪ್ರೊ.ಆಶ್ಲೆ ಡಿ’ಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News