ಬಿಜೆಪಿಯದ್ದೆ ನಿಜವಾದ ರಾಕ್ಷಸ ಸರಕಾರಗಳು: ಸಿಪಿಎಂ
ಉಡುಪಿ, ಸೆ.18: ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಸಂದರ್ಭದಲ್ಲಿ ಹಿಂದೆ ಮುಂದೆ ಆಲೋಚಿಸದೆ ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎಂದು ಘೋಷಿಸಿದ ಕಲ್ಲಡ್ಕ ಪ್ರಭಾಕರ ಭಟ್ಟರ ಕಟ್ಟಾ ಶಿಷ್ಯ ನಳಿನ್ ಕುಮಾರ್ ಕಟೀಲ್ ಕೇರಳ ಸರಕಾರ ವನ್ನು ‘ರಾಕ್ಷಸ ಸರಕಾರ’ ಎಂದು ಹೇಳುವ ಮೂಲಕ ತನಗೆ ನಾಲಗೆಯ ಮೇಲೆ ಹಿಡಿತ ಇಲ್ಲ ಎನ್ನುವುದನ್ನು ಇನ್ನೊಮ್ಮೆ ಸಾಬೀತು ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾ ಸಿಪಿಎಂ ಕಟುವಾಗಿ ಟೀಕಿಸಿದೆ.
ಕೇರಳದಲ್ಲಿ ತನ್ನ ಕೋಮುವಾದಿ ನೀತಿಗೆ ತೊಡಕಾಗಿರುವ ಸಿಪಿಐಎಂ ನೇತೃತ್ವದ ಎಡರಂಗ ಸರಕಾರವನ್ನು ಶತಾಯಗತಾಯ ಉರುಳಿಸಬೇಕೆಂದು ಬಿಜೆಪಿ, ಆರೆಸ್ಸೆಸ್ ಪಣತೊಟ್ಟಿವೆ. ಸಿಪಿಎಂ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ. ಬಿಜೆಪಿ ಆರೆಸ್ಸೆಸ್ ಹಚ್ಚುತ್ತಿರುವ ಬೆಂಕಿಯನ್ನು ನಂದಿಸಲು ಕೇರಳ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅಂತಹ ಸರಕಾರಕ್ಕೆ ರಾಕ್ಷಸ ಸರಕಾರ ಎಂದು ಬಣ್ಣಿಸುವುದು ಕಟೀಲ್‌ರ ಉದ್ಧಟತನವಾಗಿದೆ. ಇಂತಹ ವ್ಯಕ್ತಿ ಶಾಂತಿಪ್ರಿಯ ಕರಾವಳಿ ಜಿಲ್ಲೆಯ ಸಂಸದನಾಗಿರುವುದು ಯೋಗ್ಯವಲ್ಲ ಎಂದು ಸಿಪಿಎಂ ಟೀಕಿಸಿದೆ.
ಪೆಹ್ಲು ಖಾನ್, ಜುನೈದ್ ಮೊದಲಾದ ಅಮಾಯಕರನ್ನು ಥಳಿಸಿ ಕೊಲೆ ಮಾಡಿದರೂ ತೆಪ್ಪಗಿರುವ ಬಿಜೆಪಿ ಸರಕಾರಗಳೇ ನಿಜವಾದ ರಾಕ್ಷಸ ಸರಕಾರಗಳು ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.