ಕೊರಿಯ ಪರ್ಯಾಯ ದ್ವೀಪದ ಮೇಲೆ ಅದೃಶ್ಯ ಯುದ್ಧ ವಿಮಾನಗಳನ್ನು ಹಾರಿಸಿದ ಅಮೆರಿಕ

Update: 2017-09-18 16:04 GMT

ಸಿಯೋಲ್ (ದಕ್ಷಿಣ ಕೊರಿಯ), ಸೆ. 18: ಅಮೆರಿಕ ಸೇನೆಯು ದಕ್ಷಿಣ ಕೊರಿಯ ಮತ್ತು ಜಪಾನ್ ಸೇನೆಗಳ ಜೊತೆಗೆ ಸೋಮವಾರ ಯುದ್ಧಾಭ್ಯಾಸದಲ್ಲಿ ತೊಡಗಿದ್ದು, ಕೊರಿಯ ಪರ್ಯಾಯ ದ್ವೀಪದ ಮೇಲೆ ಸುಧಾರಿತ ಬಾಂಬ್‌ಗಳು ಮತ್ತು ಅದೃಶ್ಯ ಯುದ್ಧ ವಿಮಾನಗಳನ್ನು ಹಾರಿಸಿದೆ.

ಉತ್ತರ ಕೊರಿಯವು ಜಪಾನ್ ಮೇಲಿನಿಂದಾಗಿ ಕ್ಷಿಪಣಿಯೊಂದನ್ನು ಹಾರಿಸಿದ ಮೂರು ದಿನಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಉತ್ತರ ಕೊರಿಯದ ಜೊತೆಗಿನ ವೈರವು ತಾರಕಕ್ಕೇರಿದ ಸಂದರ್ಭಗಳಲ್ಲೆಲ್ಲ ಅಮೆರಿಕವು ತನ್ನ ಬಲಪ್ರದರ್ಶನವೆಂಬಂತೆ ಶಕ್ತಿಶಾಲಿ ಸೇನಾ ವಿಮಾನಗಳನ್ನು ಕೊರಿಯ ಪರ್ಯಾಯ ದ್ವೀಪಕ್ಕೆ ಕಳುಹಿಸುತ್ತದೆ.

 ಸೋಮವಾರದ ಯುದ್ಧಾಭ್ಯಾಸದಲ್ಲಿ ಅಮೆರಿಕದ ಎರಡು ಬಿ-1ಬಿ ವಿಮಾನಗಳು ಮತ್ತು ನಾಲ್ಕು ಎಫ್-35ಬಿ ವಿಮಾನಗಳು ಹಾಗೂ ದಕ್ಷಿಣ ಕೊರಿಯದ ನಾಲ್ಕು ಎಫ್-15ಕೆ ಯುದ್ಧ ವಿಮಾನಗಳು ಭಾಗವಹಿಸಿದವು ಎಂದು ದಕ್ಷಿಣ ಕೊರಿಯ ಮತ್ತು ಅಮೆರಿಕ ಸೇನೆಗಳು ಹೇಳಿವೆ.

ಅಮೆರಿಕದ ಮತ್ತು ದಕ್ಷಿಣ ಕೊರಿಯದ ವಿಮಾನಗಳು ಕೊರಿಯ ಪರ್ಯಾಯ ದ್ವೀಪದ ಉದ್ದಗಲಕ್ಕೆ ಹಾರಾಡಿದವು ಹಾಗೂ ದಕ್ಷಿಣ ಕೊರಿಯದ ವ್ಯಾಪ್ತಿಯಲ್ಲಿ ನೈಜ ಶಸ್ತ್ರಗಳನ್ನು ಪ್ರಯೋಗಿಸಿ ದಾಳಿ ಅಭ್ಯಾಸಗಳನ್ನು ನಡೆಸಿದವು ಎಂದು ಅಮೆರಿಕದ ಪೆಸಿಫಿಕ್ ಕಮಾಂಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಚೀನಾ, ರಶ್ಯ ಜಂಟಿ ನೌಕಾಭ್ಯಾಸ

ಚೀನಾ ಮತ್ತು ರಶ್ಯಗಳು ಸೋಮವಾರ ಉತ್ತರ ಕೊರಿಯದ ಸಮೀಪ ನೌಕಾಭ್ಯಾಸ ನಡೆಸಿದವು.

ರಶ್ಯದ ಪೂರ್ವದ ತುದಿಯಲ್ಲಿರುವ ವ್ಲಡಿವೊಸ್ಟೊಕ್ ಬಂದರಿನ ಹೊರಗೆ ಹಾಗೂ ರಶ್ಯ-ಉತ್ತರ ಕೊರಿಯ ಗಡಿಗೆ ಸಮೀಪ ಒಖೋಸ್ಟಕ್ ಸಮುದ್ರದ ದಕ್ಷಿಣದಲ್ಲಿ ಜಂಟಿ ಯುದ್ಧಾಭ್ಯಾಸ ನಡೆಯುತ್ತಿದೆ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News