ಜನರಿಗೆ ಸೇವೆ ನೀಡಲು ಐಎಎಸ್, ಐಪಿಎಸ್ ಪರೀಕ್ಷೆ ಎದುರಿಸುವ ಸವಾಲನ್ನು ಸ್ವೀಕರಿಸಿ- ಡಾ.ಎನ್.ವಿನಯ ಹೆಗ್ಡೆ
ಮಂಗಳೂರು, ಸೆ.18: ದೇಶದ ಜನ ಸಾಮನ್ಯರಿಗೆ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಮಾಡಲು ಐಎಎಸ್, ಐಪಿಎಸ್‌ನಂತಹ ಕೇಂದ್ರದ ನಾಗರಿಕ ಸೇವಾ ಪರೀಕ್ಷೆಗಳಿಗೆ ಯುವ ವಿದ್ಯಾರ್ಥಿಗಳು ಹಾಜರಾಗಿ ಅದರಲ್ಲಿ ತೇರ್ಗಡೆಯಾಗುವ ಸವಾಲನ್ನು ಸ್ವೀಕರಿಸಬೇಕಾಗಿದೆ ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎನ್. ವಿನಯ ಹೆಗ್ಡೆ ತಿಳಿಸಿದ್ದಾರೆ.
ಅವರು ಇಂದು ನಗರದ ಪುರಭವನದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಹಾಗೂ ಚಾಣಕ್ಯ ಐಎಎಸ್ ತರಬೇತಿ ಅಕಾಡಮಿಯ ಆಶ್ರಯದಲ್ಲಿ ಹಮ್ಮಿಕೊಂಡ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಸಕ್ತ ದೇಶದ ನಾಗರಿಕ ಸೇವಾ ವಿಭಾಗಕಕ್ಕೆ ಉದ್ಯೋಗ ಗಳಿಕೆಗಾಗಿ ಮಾತ್ರ ಸೇರುವುದು ಗುರಿಯಾಗಬಾರದು. ದೇಶ ಹಾಗೂ ಇಲ್ಲಿನ ಜನಸಾಮಾನ್ಯರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಸ್ಪಂಧಿಸುವ ಅಧಿಕಾರಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆಗಳನ್ನು ಸವಾಲಾಗಿ ಸ್ವೀಕರಿಸಿ ಅಧಿಕಾರಿಗಳಾಗಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವಂತಾಗಬೇಕು ಈ ನಿಟ್ಟಿನಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿನಯ ಹೆಗ್ಡೆ ತಿಳಿಸಿದ್ದಾರೆ.
ಭಾರತೀಯ ನಾಗರಿಕ ಸೇವೆಗೆ ಸೇರುವ ಅವಕಾಶಗಳು ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗಿದೆ. ಏಳನೆ ವೇತನ ಆಯೋಗದ ಪ್ರಸ್ತಾಪಗಳನ್ನು ಗಮನಿಸಿ ದಾಗ ಖಾಸಗಿ ರಂಗದಲ್ಲೂ ದೊರೆಯುವ ವೇತನ ಸೌಲಭ್ಯಗಳು ಈ ಸೇವೆಗೆ ಸೇರುವ ಉದ್ಯೋಗಿಗಳಿಗೆ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಕುಟುಂಬದ ನಿರ್ವಹಣೆಯ ಜೊತೆಗೆ ದೇಶದ ಸರಕಾರಿ ಸೇವಾ ಕ್ಷೇತ್ರದಲ್ಲಿ ಅಧಿಕಾರ, ಸಾಮಾಜಿಕ ಸ್ಥಾನ ಮಾನದೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಭಾರತ ಸರಕಾರದ ವಿಶ್ರಾಂತ ರಾಯಭಾರಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಲು ಶೈಕ್ಷಣಿಕ ಅರ್ಹತೆಯೊಂದಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ ಈ ನಿಟ್ಟಿನಲ್ಲಿ ಬಂಟರ ಸಂಘದ ವತಿಯಿಂದ ಚಾಣಕ್ಯ ಸಂಸ್ಥೆಯ ಜೊತೆಗೂಡಿ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಿದೆ ಎಂದು ಬಾಲಕೃಷ್ಣ ಶೆಟ್ಟಿ ಶುಭಹಾರೈಸಿದರು.
ಪ್ರಸಾರ ಭಾರತೀಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಸಿ.ಪಾಂಡಾ ಮಾತನಾಡುತ್ತಾ,ಕೇಂದ್ರ ನಾಗರಿಕ ಸೇವಾ ಕ್ಷೇತ್ರದಲ್ಲಿ ಮೊದಲಿಗಿಂತ ಹೆಚ್ಚಿನ ಸ್ಪರ್ಧೆ ಇದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಎದುರಿಸುವ ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ, ಮಾರ್ಗದರ್ಶನದ ಅಗತ್ಯವಿದೆ ಈ ನಿಟ್ಟಿನಲ್ಲಿ ಬಂಟರ ಸಂಘದಿಂದ ಉತ್ತಮ ಕೆಲಸ ಆರಂಭಗೊಂಡಿದೆ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಕ್ಸಸ್ ಗುರು ಖ್ಯಾತಿಯ ಎ.ಕೆ.ಮಿಶ್ರಾ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ನಡೆಸಿಕೊಟ್ಟರು. ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆಂಚನೂರು ಸೋಮ ಶೇಖರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಜತೆ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಡಾ.ಆಶಾ ಜ್ಯೋತಿ ರೈ ಕಾರ್ಯಕ್ರಮ ನಿರೂಪಿಸಿ, ಚಾಣಕ್ಯ ಸಂಸ್ಥೆಯ ಪ್ರತಿನಿಧಿ ಯಜ್ಞೀತ್ ಪುಷ್ಕರಣ ವಂದಿಸಿದರು.