ಮ್ಯಾನ್ಮಾರ್ ಸೇನೆಯ ವಿರುದ್ಧ ಶಸ್ತ್ರಾಸ್ತ್ರ ದಿಗ್ಬಂಧನ: ಹ್ಯೂಮನ್ ರೈಟ್ಸ್ ವಾಚ್ ಕರೆ

Update: 2017-09-18 16:21 GMT

ಯಾಂಗನ್ (ಮ್ಯಾನ್ಮಾರ್), ಸೆ. 18: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ಜನಾಂಗೀಯ ನಿರ್ಮೂಲನೆಯಲ್ಲಿ ತೊಡಗಿರುವ ಆ ದೇಶದ ಸೇನೆಯ ವಿರುದ್ಧ ಶಸ್ತ್ರಾಸ್ತ್ರ ದಿಗ್ಬಂಧನ ವಿಧಿಸಬೇಕು ಎಂದು ಮಾನವಹಕ್ಕುಗಳ ಸಂಘಟನೆ ಹ್ಯೂಮನ್ ರೈಟ್ಸ್ ವಾಚ್ ಕರೆ ನೀಡಿದೆ.

ಸೇನೆಯ ದಮನ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಮ್ಯಾನ್ಮಾರ್‌ನಲ್ಲಿ ವಾಸಿಸುತ್ತಿದ್ದ ಸುಮಾರು 4.1 ಲಕ್ಷ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಸೇನೆ ನಡೆಸುತ್ತಿರುವ ಈ ಹತ್ಯಾಕಾಂಡವನ್ನು ವಿಶ್ವಸಂಸ್ಥೆ ‘ಜನಾಂಗೀಯ ನಿರ್ಮೂಲನೆ’ ಎಂಬುದಾಗಿ ಬಣ್ಣಿಸಿದೆ.

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಆಗಸ್ಟ್ 25ರಂದು ರೊಹಿಂಗ್ಯಾ ಬಂಡುಕೋರರು ಪೊಲೀಸ್ ಮತ್ತು ಸೇನಾ ಠಾಣೆಗಳ ಮೇಲೆ ದಾಳಿ ನಡೆಸಿದ ಬಳಿಕ ಸೇನಾ ದಮನ ಕಾರ್ಯಾಚರಣೆ ನಡೆದಿದೆ. ಹಿಂಸಾಚಾರ ಮತ್ತು ನಿರಾಶ್ರಿತರ ಸಾಮೂಹಿಕ ವಲಸೆ ಬಗ್ಗೆ ವಿಶ್ವ ನಾಯಕರು ವ್ಯಕ್ತಪಡಿಸಿರುವ ಖಂಡನೆಯನ್ನು ಮ್ಯಾನ್ಮಾರ್ ಭದ್ರತಾ ಪಡೆಗಳು ನಿರ್ಲಕ್ಷಿಸಿವೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ. ಹಾಗಾಗಿ, ಮ್ಯಾನ್ಮಾರ್‌ನ ಜನರಲ್‌ಗಳು ನಿರ್ಲಕ್ಷಿಸಲಾಗದ ಕಠಿಣ ಕ್ರಮಗಳನ್ನು ಹೇರುವ ಸಮಯ ಬಂದಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

‘‘ಬರ್ಮ ಸೇನೆಯ ಜನಾಂಗೀಯ ನಿರ್ಮೂಲನೆ ಅಭಿಯಾನವನ್ನು ನಿಲ್ಲಿಸಲು ಅದರ ವಿರುದ್ಧ ದಿಗ್ಬಂಧನಗಳು ಮತ್ತು ಶಸ್ತ್ರಾಸ್ತ್ರ ನಿರ್ಬಂಧಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಸಂಬಂಧಿತ ದೇಶಗಳು ವಿಧಿಸಬೇಕು’’ ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News