ಕರ್ಣಾಟಕ ಬ್ಯಾಂಕ್: ಸಂಸ್ಥಾಪಕರ ದಿನಾಚರಣೆ
ಮಂಗಳೂರು, ಸೆ.18: ನಿಸ್ವಾರ್ಥ ಮನೋಸ್ಥಿತಿಯಿಂದ ಜೀವನದಲ್ಲಿ ಸಂತೃಪ್ತಿ ಕಾಣಲು ಸಾಧ್ಯವಿದೆ ಎಂದು ಮಾಹೆಯ ವಿಶ್ರಾಂತ ಕುಲಪತಿ ಹಾಗೂ ಖ್ಯಾತ ವೈದ್ಯಕೀಯ ತಜ್ಞ ಪದ್ಮಭೂಷಣ ಡಾ. ಬಿ.ಎಂ. ಹೆಗ್ಡೆ ಹೇಳಿದ್ದಾರೆ.
ಕರ್ಣಾಟಕ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಜರಗಿದ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ನಾನು ಎಂಬುದು ಮನುಷ್ಯನಲ್ಲಿ ಅತೃಪ್ತಿ ಮೂಡಿಡಿಸಿದರೆ, ನಾವು ಎಂಬುದು ನೆಮ್ಮದಿಯನ್ನು ತರುತ್ತದೆ. ಮನೋಸ್ಥಿತಿಯನ್ನು ನಾವು ಎಂಬುದಕ್ಕೆ ಪರಿವರ್ತಿಸಿಕೊಳ್ಳಬೇಕು ಎಂದರು.
ಮನುಷ್ಯ ಸಮಾಜಮುಖಿಯಾದಾಗ ಸಮಾಜದ ಜತೆಗೆ ಆತನ ಉನ್ನತಿಯಾಗುತ್ತದೆ. ನಮ್ಮ ಅನಾರೋಗ್ಯಗಳಿಗೆ ಜೀವನಶೈಲಿಯೇ ಕಾರಣವಾಗಿದೆ. ಔಷಧ ಸೇವನೆಯೇ ರೋಗದಿಂದ ಗುಣಮುಖರಾಗಲು ಪರಿಹಾರವಲ್ಲ. ಶಿಸ್ತುಬದ್ದ ಜೀವನದಿಂದ ರೋಗಮುಕ್ತರಾಗಬಹುದು ಎಂದು ಡಾ.ಬಿ.ಎಂ. ಹೆಗ್ಡೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಪಿ.ಜಯರಾಮ ಭಟ್, 1924 ರಲ್ಲಿ ಸ್ಥಾಪನೆಗೊಂಡ ಕರ್ಣಾಟಕ ಬ್ಯಾಂಕ್ ಸಂಸ್ಥಾಪಕರ ಆಶಯಗಳಿಗೆ ಅನುಗುಣವಾಗಿ ಉತ್ಕೃಷ್ಟತೆಯ ಪರಂಪರೆಯೊಂದಿಗೆ ಮುನ್ನಡೆಯುತ್ತಾ ಬಂದಿದೆ . ಗ್ರಾಹಕರ ಪ್ರೀತಿ ವಿಶ್ವಾಸದ ಜೊತೆಗೆ ಅನೇಕ ಪುರಸ್ಕಾರಗಳನ್ನು ಪಡೆದುಕೊಂಡಿವೆ. ಬ್ಯಾಂಕ್‌ನ್ನು ಇನ್ನಷ್ಟು ಎತ್ತರಕ್ಕೇರಿಸುವ ನಿಟ್ಟಿನಲ್ಲಿ ವಿಷನ್ 2020 ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.
ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಮಹಾಬಲೇಶ್ವರ ಎಂ.ಎಸ್. ಅವರು ಮಾತನಾಡಿ, 2016ರ ಡಿಸೆಂಬರ್ 31 ಕ್ಕೆ 57,436 ಕೋ.ರೂ. ಠೇವಣಿ ಹಾಗೂ 35,785 ಕೋ.ರೂ. ಮುಂಗಡ ಸೇರಿದಂತೆ ಬ್ಯಾಂಕಿನ ವ್ಯವಹಾರ 93,222 ಕೋ.ರೂ. ಗೆ ತಲುಪಿದ್ದು ಈ ವರ್ಷದ ಆರ್ಥಿಕ ಸಾಲಿನಲ್ಲಿ 9 ತಿಂಗಳಿನಲ್ಲಿ ಒಟ್ಟು 313.89 ಕೋ.ರೂ. ನಿವ್ವಳ ಲಾಭ ಗಳಿಸಿದೆ. ಡಿಸೆಂಬರ್ 31 ಕ್ಕೆ ಬ್ಯಾಂಕ್ ತನ್ನ ಕಾರ್ಯಕ್ಷೇತ್ರವನ್ನು ದೇಶದ 21 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಿಕೊಂಡಿದ್ದು ಒಟ್ಟು 738 ಶಾಖೆಗಳನ್ನು ಹಾಗೂ 1334 ಎಟಿಎಂಗಳನ್ನು ಹೊಂದಿದೆ ಎಂದು ವಿವರಿಸಿದರು.
ಬ್ಯಾಂಕಿನ ಸಿಎಸ್‌ಆರ್ ಚಟುವಟಿಕೆಯ ಅನ್ವಯ ಬೆಂಗಳೂರಿನ ಶ್ರೀ ಕೃಷ್ಣ ಸೇವಾಶ್ರಮ ಟ್ರಸ್ಟಿನ ಆಸ್ಪತ್ರೆ ಕಟ್ಟಡಕ್ಕೆ 20 ಲಕ್ಷ ರೂ., ಶಿವಮೊಗ್ಗದ ಹೊಯ್ಸಳ ಪ್ರತಿಷ್ಠಾನದ ಡಯಾಲಿಸಿಸ್ ಆಸ್ಪತ್ರೆಗೆ 2 ಡಯಾಲಿಸಿಸ್ ಯಂತ್ರಗಳಿಗೆ 12 ಲಕ್ಷ ರೂ. ಹಾಗೂ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಮಂಗಳಾ ಹಿ.ಪ್ರಾ. ಶಾಲೆಯ ಮೂಲಭೂತ ಸೌಲಭ್ಯ ಅಭಿವೃದ್ದಿಗೆ 5 ಲಕ್ಷ ರೂ. ನೆರವು ನೀಡಲಾಯಿತು. ಮಹಾಪ್ರಬಂಧಕ ಚಂದ್ರಶೇಖರ ರಾವ್ ಬಿ. ವಂದಿಸಿದರು.