ನೇತ್ರಾವತಿ ರೈಲಿನಲ್ಲಿ ಮುಂಬೈ ಚಿನ್ನದ ವ್ಯಾಪಾರಿಯ ದರೋಡೆ
ಪಡುಬಿದ್ರೆ, ಸೆ.18: ಮುಂಬೈಯಿಂದ ಕೇರಳಕ್ಕೆ ರೈಲಿನಲ್ಲಿ ಪ್ರಯಾಣಿಸುತಿದ್ದ ಚಿನ್ನದ ವ್ಯಾಪಾರಿಯೊಬ್ಬರಿಂದ ನಾಲ್ಕು ಮಂದಿಯ ತಂಡ ಪಿಸ್ತೂಲ್ ಹಾಗೂ ಚೂರಿ ತೋರಿಸಿ ಕೋಟ್ಯಂತ ರೂ. ಮೌಲ್ಯದ ಚಿನ್ನವನ್ನು ದರೋಡೆಗೈದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.
ಮುಂಬೈಯಿಂದ ತಿರುವನಂತಪುರಂಗೆ ಹೋಗುವ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪಡುಬಿದ್ರೆಯಿಂದ ಸುರತ್ಕಲ್ ನಡುವೆ ಬೆಳಗ್ಗೆ 6:30 ರಿಂದ 6:40ರ ಮಧ್ಯಾವಧಿಯಲ್ಲಿ ಈ ಘಟನೆ ನಡೆದಿದ್ದು, ದರೋಡೆಕೋರ ತಂಡವು ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದು ಚಿನ್ನದೊಂದಿಗೆ ಪರಾರಿಯಾಗಿದೆ.
ಮುಂಬೈಯ ಚಿನ್ನದ ವ್ಯಾಪಾರಿ, ಮೂಲತಃ ರಾಜಸ್ಥಾನದ ಉದಯಪುರ ಜಿಲ್ಲೆಯ ರಾಜೇಂದ್ರ ಸಿಂಗ್ (38) ಎಂಬವರು ಸೆ.17ರಂದು ಮುಂಬೈಯ ಪನ್ವೇಲ್‌ನಿಂದ ಕೇರಳದ ತಿರುವನಂತಪುರಕ್ಕೆ ನೇತ್ರಾವತಿ ರೈಲಿನಲ್ಲಿ ಚಿನ್ನದ ಬ್ಯಾಗ್‌ನೊಂದಿಗೆ ಹೊರಟಿದ್ದರು. ರೈಲಿನ ಎಸ್7 ಸ್ಲೀಪರ್ ಕೋಚ್‌ನಲ್ಲಿ ಮಲಗಿದ್ದ ರಾಜೇಂದ್ರ ಸಿಂಗ್ ಅವರನ್ನು ನಾಲ್ಕು ಜನರ ತಂಡ ಇಂದು ಬೆಳಗ್ಗೆ ಎಚ್ಚರಿಸಿತ್ತೆನ್ನಲಾಗಿದೆ. ರಾಜೇಂದ್ರ ಸಿಂಗ್ ಎಚ್ಚರಗೊಳ್ಳುತ್ತಿದ್ದಂತೆ ದರೋಡೆಕೋರರು ತಮ್ಮಲ್ಲಿದ್ದ ಪಿಸ್ತೂಲ್ ಹಾಗೂ ಚೂರಿಯನ್ನು ತೋರಿಸಿ ಅವರನ್ನು ಬೆದರಿಸಿದರು. ಬಳಿಕ ರಾಜೇಂದ್ರ ಸಿಂಗ್ ಅವರ ಬ್ಯಾಗ್‌ನ ಕೀಯನ್ನು ಅವರ ಮೂಲಕವೇ ತೆರಿಸಿದರು. ಸುರತ್ಕಲ್ ರೈಲು ನಿಲ್ದಾಣದ ಬರುತ್ತಿದ್ದಂತೆಯೇ ದರೋಡೆಕೋರರು 4.11ಕೆ.ಜಿ. ಚಿನ್ನದ ಬಳೆಗಳ ಬ್ಯಾಗ್‌ನ್ನು ರಾಜೇಂದ್ರ ಸಿಂಗ್‌ರಿಂದ ಕಸಿದು ರೈಲಿನಿಂದ ಇಳಿದು ಪರಾರಿಯಾದರು ಎನ್ನಲಾಗಿದ್ದು, ದರೋಡೆಗೈದ ಒಟ್ಟು ಚಿನ್ನದ ಮೌಲ್ಯ ಸುಮಾರು 4.28 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಬಳಿಕ ರಾಜೇಂದ್ರ ಸಿಂಗ್ ಅದೇ ರೈಲಿನಲ್ಲಿ ಮಂಗಳೂರಿಗೆ ತೆರಳಿ ಸ್ನೇಹಿತರ ಮೂಲಕ ಪಡುಬಿದ್ರೆಗೆ ಆಗಮಿಸಿ ಪಡುಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಘಟನೆ ನಡೆಯುವ ವೇಳೆ ಪ್ರಯಾಣಿಕರಿದ್ದರೂ ಕೂಡ ಯಾರೂ ಮಾತನಾಡಲಿಲ್ಲ. ದರೋಡೆಕೋರರಲ್ಲಿ ಪಿಸ್ತೂಲ್ ಇದ್ದ ಕಾರಣ ಎಲ್ಲರೂ ಘಟನೆಯನ್ನು ವೀಕ್ಷಿಸುತ್ತಿದ್ದರೆ ಹೊರತು ಯಾರು ಸಹಾಯ ಮಾಡಲಿಲ್ಲ ಎಂದು ರಾಜೇಂದ್ರ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ.
ಮೂರು ತಂಡ ರಚನೆ: ಎಸ್ಪಿ
ದರೋಡೆ ಪ್ರಕರಣದ ತನಿಖೆಗಾಗಿ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನವನೆ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ಪತ್ರಿಕೆಗೆ ತಿಳಿಸಿದ್ದಾರೆ.
ಕಾಪು ಪೊಲೀಸ್ ಉಪನಿರೀಕ್ಷಕ ಹಾಲಮೂರ್ತಿ, ಪಡುಬಿದ್ರೆ ಪೊಲೀಸ್ ನಿರೀಕ್ಷಕ ಹಾಗೂ ಉಡುಪಿ ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್ ಅವರ ತಂಡಗಳು ಈಗಾಗಲೇ ಬೇರೆ ಬೇರೆ ಕಡೆಗಳಲ್ಲಿ ತನಿಖೆ ನಡೆಸುತ್ತಿದ್ದು, ಕೆಲವೊಂದು ಸುಳಿವುಗಳು ಲಭ್ಯವಾಗಿವೆ. ತನಿಖೆ ಮುಂದುವರೆಯುತ್ತಿದೆ ಎಂದು ಅವರು ಹೇಳಿದ್ದಾರೆ.