ಕುಬಣೂರು ಶ್ರೀಧರರಾಯರ ನಿಧನಕ್ಕೆ ಸಂತಾಪ
Update: 2017-09-18 22:45 IST
ಉಡುಪಿ, ಸೆ.18: ಕಟೀಲು ಮೇಳದ ಪ್ರಧಾನ ಭಾಗವತರು, ‘ಯಕ್ಷಪ್ರಭಾ’ ಮಾಸ ಪತ್ರಿಕೆಯ ಸಂಪಾದಕರೂ ಆಗಿದ್ದ ಕುಬಣೂರು ಶ್ರೀಧರ ರಾಯರು ತಮ್ಮ ವಿಶಿಷ್ಟ ಸಂಗೀತ ಶೈಲಿಯ ಹಾಡುಗಾರಿಕೆಯಿಂದ ಯಕ್ಷಗಾನ ಭಾಗವತಿಕೆ ವಿಸ್ತರಿಸಿದವರು. ಕರ್ಣಾಟಕ ಸಂಗೀತ ಅಭ್ಯಾಸ ಮಾಡಿದ್ದ ಇವರು ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿ ಯಕ್ಷಗಾನ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಂಡ ಸಾಧಕರು. ಸ್ವತಃ ಮೇಳ ಸಂಘಟಿಸಿದ ಅನುಭವ ಹೊಂದಿದವರು. ಯಕ್ಷಗಾನ ಪ್ರಸಂಗಕರ್ತರೂ ಆಗಿದ್ದ ಇವರು ನಾಲ್ಕು ದಶಕಗಳ ಯಕ್ಷ ತಿರುಗಾಟ ನಡೆಸಿ ಅನೇಕ ಕಲಾವಿದರನ್ನು ಬೆಳೆಸಿದವರು ರವಿವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
66 ವರ್ಷದ ಶ್ರೀಧರರಾಯರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ ರಾವ್, ಕಾರ್ಯದರ್ಶಿ ಮುರುಳಿ ಕಡೆಕಾರ್ ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.