ರೊಹಿಂಗ್ಯಾರನ್ನು ಪಾಕ್ ಕರೆದೊಯ್ಯಲಿ: ಗಿರಿರಾಜ್ ಸಿಂಗ್
ಹೊಸದಿಲ್ಲಿ, ಸೆ.19: ವಿವಾದಾಸ್ಪದ ಹೇಳಿಕೆಗೆ ಹೆಸರಾಗಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತೊಂದು ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. “ಜೆಇಎಂ ಮುಖಂಡ ಮಸೂದ್ ಅಝರ್‌ಗೆ ರೊಹಿಂಗ್ಯಾರ ಮೇಲೆ ಅತ್ಯಂತ ಅಕ್ಕರೆ ಇರುವುದರಿಂದ ಪಾಕಿಸ್ತಾನ ರೊಹಿಂಗ್ಯಾರನ್ನು ಕರೆದೊಯ್ಯಲಿ” ಎಂದು ಸಿಂಗ್ ಹೇಳಿದ್ದಾರೆ.
ಇನ್ನಷ್ಟು ಗಡಿ ನುಸುಳುಕೋರರನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಭಾರತಕ್ಕಿಲ್ಲ. ಆದ್ದರಿಂದ ರೊಹಿಂಗ್ಯ ಮುಸ್ಲಿಮರು ದೇಶ ಬಿಟ್ಟು ಹೊರನಡೆಯಲೇ ಬೇಕು. ರೊಹಿಂಗ್ಯರು ಅಕ್ರಮ ವಲಸಿಗರಾಗಿದ್ದು ಭಾರತದ ಆಂತರಿಕ ಭದ್ರತೆಗೆ ಬೆದರಿಕೆ ಒಡ್ಡಿದ್ದಾರೆ. ಮಾನವೀಯತೆಯು ಕಾನೂನಿಗಿಂತ ಮಿಗಿಲಲ್ಲ ಎಂದು ಸಚಿವರು ಹೇಳಿದರು.
ಮಸೂದ್ ಅಝರ್‌ಗೆ ರೊಹಿಂಗ್ಯಾರ ಬಗ್ಗೆ ಅಷ್ಟೊಂದು ಮಮಕಾರವಿದ್ದರೆ ರೊಹಿಂಗ್ಯಾರವನ್ನು ಕರೆಸಿಕೊಳ್ಳುವಂತೆ ಪಾಕ್ ಸರಕಾರಕ್ಕೆ ಹೇಳಲಿ ಎಂದ ಅವರು, ಭಾರತದಲ್ಲೂ ರೊಹಿಂಗ್ಯಾರ ಪರ ನಿಲುವು ಹೊಂದಿರುವ ಕೆಲವು ರಾಜಕಾರಣಿಗಳಿದ್ದಾರೆ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ತಿಳಿಸಿದರು.
ದೇಶದಲ್ಲಿ ಪ್ರಸ್ತುತ 14,000 ರೊಹಿಂಗ್ಯಾಗಳಿದ್ದಾರೆ ಎಂದು ಕಳೆದ ಆಗಸ್ಟ್ 9ರಂದು ಸರಕಾರ ಸಂಸತ್ತಿನಲ್ಲಿ ಹೇಳಿಕೆ ನೀಡಿತ್ತು. ಆದರೆ ಕೆಲವು ಮೂಲಗಳ ಪ್ರಕಾರ ದೇಶದಲ್ಲಿ ಸುಮಾರು 40,000 ರೊಹಿಂಗ್ಯಾಗಳು ವಾಸಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಜಮ್ಮು, ಹೈದರಾಬಾದ್, ಹರ್ಯಾಣ, ಉತ್ತರಪ್ರದೇಶ, ದಿಲ್ಲಿ ಮತ್ತು ರಾಜಸ್ತಾನ ಪ್ರದೇಶದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.