ಸ್ವಚ್ಛತೆಯ ಕೊರತೆಯಿಂದ ಭಾರತಕ್ಕೆ ಭೇಟಿ ನೀಡಲು ಪ್ರವಾಸಿಗರ ಹಿಂದೇಟು: ಜಾವಡೇಕರ್
ಹೊಸದಿಲ್ಲಿ, ಸೆ.19: ಭಾರತದಲ್ಲಿ ಆಕರ್ಷಣೀಯ ಪ್ರವಾಸೀ ತಾಣಗಳಿವೆ. ಆದರೆ ದೇಶದಲ್ಲಿ ನೈರ್ಮಲ್ಯ ವ್ಯವಸ್ಥೆ ಕೆಳಮಟ್ಟದಲ್ಲಿರುವ ಕಾರಣ ಇಲ್ಲಿಗೆ ಪ್ರವಾಸ ಬರಲು ವಿದೇಶೀಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರವಾಸಿ ತಾಣಗಳ ಸಂಖ್ಯೆ ಅಧಿಕವಾಗಿದೆ. ಆದರೆ ಭಾರತಕ್ಕಿಂತ 10 ಪಟ್ಟು ಅಧಿಕ ಪ್ರವಾಸಿಗರನ್ನು ಪ್ಯಾರಿಸ್ ಸೆಳೆಯುತ್ತಿದೆ. ನಮ್ಮ ಪ್ರವಾಸೀ ತಾಣಗಳು ಸ್ವಚ್ಛವಾಗಿಲ್ಲದಿರುವುದು ಇದಕ್ಕೆ ಕಾರಣವಾಗಿದೆ ಎಂದು ಸಚಿವರು ತಿಳಿಸಿದರು.
ಶಾಲಾ ಪರಿಸರ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯ ನಿರ್ವಹಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ‘ಸುಲಭ್ ಶೌಚಾಲಯ್’ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾವಡೇಕರ್ ಮಾತನಾಡಿದರು.
ಭಾರತೀಯರಿಗೆ ಎಲ್ಲೆಂದರಲ್ಲಿ ಕಸ ಬಿಸಾಡುವುದು ಅಭ್ಯಾಸವಾಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಬೇಕಿದೆ. ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಪೋಷಕರು ಮಾಡುವುದರ ಜೊತೆಗೆ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಸರಕಾರದ ಸ್ವಚ್ಛತಾ ಅಭಿಯಾನ ಯಶಸ್ವಿಯಾಗುತ್ತದೆ ಎಂದು ಸಚಿವರು ಹೇಳಿದರು.
ಪರಿಸರ ಸ್ವಚ್ಛತೆಯಲ್ಲಿ ‘ಸುಲಭ್ ಇಂಟರ್‌ನ್ಯಾಷನಲ್’ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ಅವರು, 50 ವರ್ಷಗಳಿಂದಲೂ ಸ್ವಚ್ಛತಾ ಸೇವೆಯನ್ನು ಕನಿಷ್ಠ ಶುಲ್ಕ ಪಡೆದು ನಿರ್ವಹಿಸುತ್ತಾ ಬಂದಿರುವ ಸಂಸ್ಥೆ, ಸ್ವಚ್ಛತಾ ಕಾರ್ಯದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ನಡೆಸಿದೆ. 50 ವರ್ಷದ ಹಿಂದೆ ಸಂಸ್ಥೆ ಆರಂಭಗೊಂಡಾಗ, ಮೂತ್ರ ಮಾಡಲೂ ಯಾರು ಹಣ ನೀಡುತ್ತಾರೆ ಎಂಬ ಭಾವನೆ ಜನರಲ್ಲಿತ್ತು. ಆದರೆ ಜನರಲ್ಲಿ ಸ್ವಚ್ಛತೆಯ ಭಾವನೆ ಮೂಡಿಸುವಲ್ಲಿ ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥೆ ಗಮನಾರ್ಹ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.
ಸ್ವಚ್ಛತಾ ಅಭಿಯಾನದಡಿ, ಕಳೆದೊಂದು ವರ್ಷದಿಂದ ಸುಮಾರು 4,50,000 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರಿಂದ ಅರ್ಧದಲ್ಲೇ ವ್ಯಾಸಂಗ ಕೈಬಿಡುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಸಚಿವ ಜಾವಡೇಕರ್ ಹೇಳಿದರು.