ಸೆ. 25ರಂದು ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಸಮಾವೇಶ
ಬೆಳ್ತಂಗಡಿ, ಸೆ.19: ಚುನಾವಣೆ ಹತ್ತಿರ ಬಂದಾಗ ಬಿಜೆಪಿ ಜಿಲ್ಲೆಯಲ್ಲಿ ಸಾಮಾಜಿಕ ಶಾಂತಿ ಕದಡಲು, ಗಲಭೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಈ ಗಲಭೆಗಳ ಮೂಲಕ ಅಮಾಯಕರು ಜೀವ ಕಳೆದುಕೊಳ್ಳುವಂತಹ ಸ್ಥಿತಿಯಿದ್ದು ಇದನ್ನು ಜಿಲ್ಲೆಯ ಶಾಂತಿಪ್ರಿಯ ಜನರು ಸಹಿಸಲು ಸಾಧ್ಯವಿಲ್ಲ. ಗಲಭೆಗಳ ಹಿಂದಿರುವವರು ಯಾರು ಎಂಬುದು ಸಾಮಾನ್ಯ ಜನರಿಗೆ ತಿಳಿದಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲ ಎಂಟು ವಿಧಾನಸಭಾಕ್ಷೇತ್ರಗಳಲ್ಲಿಯೂ ಗೆಲುವನ್ನು ಪಡೆಯಲಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ ಹರೀಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಳ್ತಂಗಡಿ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸುವ ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದು ಜಿಲ್ಲೆಯಲ್ಲಿರುವ 1766 ಬೂತ್‌ಗಳಲ್ಲಿ 1722 ಬೂತ್‌ಗಳಿಗೆ ಬೂತ್‌ಕಮಿಟಿಗಳನ್ನು ರಚಿಸುವ ಕಾರ್ಯ ಪೂರ್ಣಗೊಂಡಿದೆ ಬೆಳ್ತಂಗಡಿಯಿಂದ 12 ಮಂದಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರುಗಳ ನೇಮಕಾತಿ ಕಾರ್ಯವಾಗಿದ್ದು ಪಕ್ಷದ ನೂತನ ಜಿಲ್ಲಾ ಸಮಿತಿ ಒಂದುವಾರದಲ್ಲಿ ರಚನೆಯಾಗಲಿದೆ ಅದೇ ರೀತಿ ಪಕ್ಷದ ಎಲ್ಲ ಬ್ಲಾಕ್ ಸಮಿತಿಗಳರಚನಾ ಕಾರ್ಯವೂ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು ಚುನಾವಣೆಗೆ ಸಂಪೂರ್ಣ ಸಿದ್ದವಾಗಿದೆಸೆ 22 ರಿಂದ 25 ರವರೆಗೆ ಎಐಸಿಸಿ ಕಾರ್ಯದರ್ಶಿ ಪಿ.ಸಿವಿಷ್ಣುನಾಥ್ ಅವರು ಜಿಲ್ಲೆಯಲ್ಲಿದ್ದು ಎಲ್ಲ ವಿಧಾನಸಭಾಕ್ಷೇತ್ರಗಳಲ್ಲಿಯೂ ಸಮಾವೇಶಗಳು ನಡೆಯಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ತನ್ನ ಸರಕಾರದ ಐದು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದೆ. ಕಳೆದ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಶೇ 95 ರಷ್ಟನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಈಡೇರಿಸಿದೆ ಅನ್ನಭಾಗ್ಯದಿಂದ ಆರಂಭಿಸಿ ಇದೀಗ ರಾಜ್ಯದ ಎಲ್ಲ ಜನರಿಗೂ ಆರೋಗ್ಯಭಾಗ್ಯವನ್ನು ಒದಗಿಸುವ ಕಾರ್ಯವನ್ನು ಮಾಡಿದೆ. ಇದು ಇಡೀ ದೇಶಕ್ಕೆ ಮಾದರಿ ಕಾರ್ಯಕ್ರಮವಾಗಿದೆ ಎಂದರು.
ಕೇಂದ್ರ ಸರಕಾರ ಪ್ರತಿದಿನ ಸದ್ದಿಲ್ಲದೆ ಪಟ್ರೋಲ್ ದರವನ್ನು ಏರಿಸುತ್ತಿದೆ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ದರ ಏರಿಕೆಯಾದಾಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದವರು ಈಗ ಎಲ್ಲಿದ್ದಾರೆ. ಅಡುಗೆ ಅನಿಲದ ಸಬ್ಸೀಡಿಯನ್ನು ಪೂರ್ಣವಾಗಿ ನಿಲ್ಲಿಸಲು ಮುಂದಾಗುತ್ತಿದ್ದಾರೆ ಇದು ಮೋದಿ ಸರಕಾರದ ಸಾಧನೆಯಾಗಿದೆ. ಕೇಂದ್ರ ಸರಕಾರ ಕರ್ನಾಟಕದ ವಿರುದ್ದ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಮಹದಾಯಿ ವಿಚಾರ, ಬರ ಪರಿಹಾರದ ವಿಚಾರಗಳಲ್ಲಿ ರಾಜ್ಯದ ಬಿಜೆಪಿ ನಾಯಕರುಗಳು ಸದಾ ಮೌನವಾಗಿರುತ್ತಾರೆ ಎಂದರು.
ಶೋಭಾ ಕರಂದ್ಲಾಜೆಯವರು ರಾಜ್ಯ ಸರಕಾರ ಲೆಕ್ಕ ಕೊಡಬೇಕು ಎಂದು ಕೇಳುತ್ತಿದ್ದಾರೆ ಜನರ ಹಣಕ್ಕೆ ಜನರಿಗೆ ಸರಕಾರ ಲೆಕ್ಕ ಕೊಡುತ್ತದೆ ಆದರೆ ನೀವು ರಾಜ್ಯದಾಧ್ಯಂತ ಮಾಡಿಕೊಂಡಿರುವ ಆಸ್ತಿಯ ಲೆಕ್ಕವನ್ನು ಮೊದಲು ಕೊಡಿ ನೀವು ರಾಜಕೀಯಕ್ಕೆ ಬಂದಾಗ ನಿಮ್ಮ ಆಸ್ತಿ ಎಷ್ಟು ಈಗ ನಿಮ್ಮ ಆಸ್ತಿ ಎಷ್ಟು ಎಂದು ಲೆಕ್ಕ ಕೊಡಿ ಆಗ ನಿಮ್ಮ ಬಣ್ಣ ಬಯಲಾಗುತ್ತದೆ ಎಂದರು. ಭ್ರಷ್ಟಾಚಾರಕ್ಕಾಗಿ ಜೈಲಿಗೆ ಹೋಗಿ ಬಂದವರು, ಜಮೀನಿನಲ್ಲಿ ಹೊರಬಂದು ತಿರುಗಾಡುತ್ತಿರುವವರು, ದೊಡ್ಡ ಆರೋಪಗಳನ್ನು ಎದುರಿಸುತ್ತಿರುವವರು ಇದೀಗ ಭ್ರಷ್ಟಾಚಾರದ ವಿರುದ್ದ ಮಾತನಾಡುತ್ತಿದ್ದಾರೆ ಇವರಿಗೆ ಈ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.
ಮಂಗಳೂರಿನಲ್ಲಿ ನಡೆದ ಬೈಕ್ ರ್ಯಾಲಿ ವಿಫಲವಾಯಿತು ಅದಕ್ಕೆ ಬೇಕಾಗಿ ಸಂಸದರು ಪೋಲೀಸ್ ಠಾಣೆಗೆ ತೆರಳಿ ಪೋಲೀಸರ ಮೇಲೆ ದಭ್ಬಾಳಿಕೆ ನಡೆಸುವ ಕಾರ್ಯ ಮಾಡಿದ್ದಾರೆ. ಜನಪ್ರತಿನಿಧಿಗಳು ನಾಯಕರುಗಳು ಗಲಭೆಗಳನ್ನು ನಡೆಸಲು ಪ್ರಚೋದನೆ ನೀಡುತ್ತಿರುವುದು ಸರಿಯಲ್ಲ ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಅಧ್ಯಕ್ಷರಾದ ಶ್ರೀನಿವಾಸ ವಿ ಕಿಣಿ, ನಗರ ಬ್ಲಾಕ್ ಅಧ್ಯಕ್ಷರಾದ ರಾಜಶೇಖರ ಅಜ್ರಿ, ಬೆಳ್ತಂಗಡಿ ಪಟ್ಟಣ ಪಂಚಾಯತು ಅಧ್ಯಕ್ಷ ಮುಗುಳಿ ನಾರಾಯಣರಾವ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಅಭಿನಂದನ್ ಹರೀಶ್, ಗೇರು ಅಭಿವೃದ್ದಿ ನಿಗಮದ ನಿರ್ದೇಶಕ ಚಂದು ಎಲ್, ಇಂಟೆಕ್ ಅಧ್ಯಕ್ಷ ಸುಭಾಶ್ಚಂದ್ರ ರೈ, ಜಗದೀಶ್ ಡಿ.ಉಪಸ್ಥಿತರಿದ್ದರು.
ಸೆ 25 ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಸಮಾವೇಶ
ಬೆಳ್ತಂಗಡಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ನೇತೃತ್ವದಲ್ಲಿ ಬೆಳ್ತಂಗಡಿಯ ಗುರುನಾರಾಯಣ ಸಭಾಭವನದಲ್ಲಿ ಸೆ 25 ರಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಎಐಸಿಸಿ ಕಾರ್ಯದರ್ಶಿ ಪಿಸಿ ವಿಷ್ಣುನಾಥ್ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ ವಸಂತ ಬಂಗೇರ ಅವರು ವಹಿಸಲಿದ್ದಾರೆ. ಸಚಿವರುಗಳಾದ ಬಿ ರಮಾನಾಧ ರೈ, ಯು.ಟಿ ಖಾದರ್ ಕೆಪಿಸಿಸಿ ಕಾರ್ಯದರ್ಶಿ ಐವಾನ್ ನಿಗ್ಲಿ ಹಾಗೂ ಇತರೆ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.