×
Ad

ಸೆ.21ರಿಂದ ಅ.2: ಪುತ್ತೂರು ದಸರಾ ಉತ್ಸವ

Update: 2017-09-19 20:37 IST

ಪುತ್ತೂರು, ಸೆ. 19: ಪುತ್ತೂರು ದಸರಾ ನವ ದುರ್ಗಾರಾಧನಾ ಸಮಿತಿಯ ಆಶ್ರಯದಲ್ಲಿ 15ನೆ ವರ್ಷದ ಪುತ್ತೂರು ದಸರಾ ಉತ್ಸವ ಸೆ. 21ರಿಂದ ಆರಂಭಗೊಂಡು ಅಕ್ಟೋಬರ್ 2ರ ತನಕ ನಾನಾ ಧಾರ್ಮಿಕ ವಿಶೇಷತೆಗಳೊಂದಿಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಯುವುದು ಎಂದು ಸಮಿತಿಯ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿನ ಭಕ್ತ ಜನರ ಸಹಾಯ, ಸಹಕಾರದೊಂದಿಗೆ ಕಳೆದ 14 ವರ್ಷಗಳಿಂದ ದಸರಾ ಉತ್ಸವ ನಡೆಯುತ್ತಾ ಬಂದಿದೆ. ಮಂಗಳೂರಿನ ಕುದ್ರೋಳಿ ಕ್ಷೇತ್ರ ಹೊರತುಪಡಿಸಿದರೆ ಇಡೀ ರಾಜ್ಯದಲ್ಲೇ ನವದುರ್ಗೆಯರನ್ನು ಸ್ಥಾಪಿಸಿ ದಸರಾ ಆಚರಣೆ ಮಾಡುವ ಮತ್ತೊಂದು ಸ್ಥಳವಿದ್ದರೆ ಅದು ಪುತ್ತೂರು ಮಾತ್ರ. ನವದುರ್ಗೆಯರು, ಶಾರದೆ ಮತ್ತು ಗಣಪತಿಯ ಮೂರ್ತಿಗಳನ್ನು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸ್ಥಾಪಿಸಿ ಆರಾಧನೆ ಮಾಡಲಾಗುತ್ತದೆ. ಅಕ್ಟೋಬರ್ 2ರಂದು ದಸರಾ ಮೆರವಣಿಗೆ ನಡೆಯಲಿದೆ ಎಂದರು.

ಈಗಾಗಲೇ ವಿಗ್ರಹಗಳ ರಚನೆ ಪೂರ್ಣಗೊಂಡಿದೆ. ಸೆ.21ರಂದು ಬೆಳಗ್ಗೆ ನಗರದ 9 ಕಡೆಗಳಿಂದ ನವದುರ್ಗೆಯರ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತರಲಾಗುವುದು. 11.30ಕ್ಕೆ ಗಣಪತಿ ಮತ್ತು ನವ ದುರ್ಗೆಯರ ಪ್ರತಿಷ್ಠೆ ನಡೆಯುವುದು. 12.15ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಅವರು ವಹಿಸುವರು. ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ಅವರು ಉದ್ಘಾಟಿಸುವರು.

ದೇವಳದ ಕಾರ್ಯ ನಿರ್ವಹಣಾ ಅಧಿಕಾರಿ ಜಗದೀಶ್ ಎಸ್ ಅವರು ಧ್ವಜಾರೋಹಣ ಮಾಡುವರು. ಸೆ. 30ರಂದು ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಅವರು ವಹಿಸುವರು. ಉಪನ್ಯಾಸಕ ಡಾ.ನವೀನ್ ಕುಮಾರ್ ಮರಿಕೆ ಮತ್ತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸಂಜೀವ ಕಲ್ಲೇಗ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಅಕ್ಟೋಬರ್ 1ರಂದು ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಅವರು ಆಶೀರ್ವಚನ ನೀಡುವರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಉಪಸ್ಥಿತರಿರುವರು. ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕರುಣಾಕರ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪೌರೋಹಿತ್ಯ, ಪತ್ರಿಕೋದ್ಯಮ, ಶಿಲ್ಪ, ಶಿಕ್ಷಣ, ಸಿನಿಮಾ, ಧಾರ್ಮಿಕ, ವೈದ್ಯಕೀಯ, ರಂಗಭೂಮಿ, ಸಂಗೀತ, ಕ್ರೀಡೆ, ಕಲೆ, ಕೃಷಿ, ದೈವಾರಾಧನೆ ಇವೇ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ಸೆ. 24ರಂದು ಬೆಳಗ್ಗೆ 6 ಗಂಟೆಯಿಂದ ಸಹಸ್ರ ನಾಳೀಕೇರ ಗಣಯಾಗ, ಅದೇ ದಿನ ಸಂಜೆ 5 ಗಂಟೆಯಿಂದ ಶ್ರೀ ಚಕ್ರಪೂಜೆ, 27ರಂದು ಬೆಳಗ್ಗೆ 9 ಗಂಟೆಗೆ ಶಾರದಾ ಪ್ರತಿಷ್ಠೆ, ಮಧ್ಯಾಹ್ನ ಮಹಿಳೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ, ಪ್ರತೀ ದಿನ ಪೂಜಾದಿ ಕಾರ್ಯಕ್ರಮಗಳು ನಡೆಯುವುದು. ಅಕ್ಟೋಬರ್ 2ರಂದು ಪೂರ್ವಾಹ್ನ 8.30ರಿಂದ ಸಾಮೂಹಿಕ ಚಂಡಿಕಾ ಹೋಮ, ಸಂಜೆ 5ರಿಂದ ಪುತ್ತೂರು ದಸರಾ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.

ಸಮಿತಿಯ ಕಾರ್ಯಾಧ್ಯಕ್ಷ ರಾಜೇಶ್ ಬನ್ನೂರು, ಸಹ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಕೆ., ಜತೆ ಕಾರ್ಯದರ್ಶಿ ಲೋಕೇಶ್ ಬನ್ನೂರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News