ಯುವರಾಜ್ ‘ಸಿಕ್ಸ್’ ಸಿಕ್ಸರ್‌ಗಳ ಸಾಧನೆಗೆ 10 ವರ್ಷ
ಜೋಹಾನ್ಸ್‌ಬರ್ಗ್, ಸೆ.19: ಆಲ್‌ರೌಂಡರ್ ಯುವರಾಜ್ ಸಿಂಗ್ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‌ನ ಸೂಪರ್ -8 ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆಗೆ 10 ಸಂದಿವೆ.
2007, ಸೆ.19ರಂದು ದಕ್ಷಿಣ ಆಫ್ರಿಕದ ಡರ್ಬನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೂಪರ್ 8 ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರು ಸುವರ್ಟ್ ಬ್ರಾಡ್ ಅವರ ಒಂದೇ ಓವರ್‌ನ ಆರು ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದಿದ್ದರು.
ಈ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 18 ರನ್‌ಗಳ ರೋಚಕ ಜಯ ಗಳಿಸಿತ್ತು. ಭಾರತ ಯುವರಾಜ್ ಸಿಂಗ್ ಅವರ ಸ್ಫೋಟಕ 58 ರನ್(16ಎ, 3, 7ಸಿ) , ಗೌತಮ್ ಗಂಭೀರ್ 58 ರನ್(41ಎ, 7ಬೌ,1ಸಿ) ಮತ್ತು ವೀರೇಂದ್ರ ಸೆಹ್ವಾಗ್ 68 ರನ್(52ಎ, 4ಬೌ,3ಸಿ) ಅವರ ಅರ್ಧಶತಕಗಳ ನೆರವಿನಲ್ಲಿ ಭಾರತ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 218 ರನ್ ಗಳಿಸಿತ್ತು.
ಗೆಲುವಿಗೆ 219 ರನ್ ಮಾಡಬೇಕಿದ್ದ ಇಂಗ್ಲೆಂಡ್‌ಗೆ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 200ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು.
ಯುವರಾಜ್ ಸಿಂಗ್ ಕ್ರೀಸ್‌ಗೆ ಆಗಮಿಸುವ ಹೊತ್ತಿಗೆ ಭಾರತ 16.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 155 ರನ್ ಗಳಿಸಿತ್ತು. ರಾಬಿನ್ ಉತ್ತಪ್ಪ (6) ಅವರು ಟ್ರೆಮ್ಲೆಟ್ ಓವರ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ ಹಿನ್ನೆಲೆಯಲ್ಲಿ ಯುವರಾಜ್ ಕ್ರೀಸ್‌ಗೆ ಆಗಮಿಸಿದ್ದರು.
ಗಂಭೀರ್, ಸೆಹ್ವಾಗ್ ಅರ್ಧಶತಕ ದಾಖಲಿಸಿ ಭಾರತಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಟ್ರೆಮ್ಲೆಟ್ ಅವರ ಆ ಓವರ್‌ನ 5ನೆ ಎಸೆತದಲ್ಲಿ ಯುವರಾಜ್ ಖಾತೆ ತೆರೆಯಲಿಲ್ಲ. ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಯುವರಾಜ್ ಖಾತೆ ತೆರೆದಿದ್ದರು. 17ನೆ ಓವರ್ ಮುಕ್ತಾಯಕ್ಕೆ ಭಾರತ 3 ವಿಕೆಟ್ ನಷ್ಟದಲ್ಲಿ 159 ರನ್ ಗಳಿಸಿತು. ಎಂಎಸ್ ಧೋನಿ ಔಟಾಗದೆ 5 ರನ್ (4ಎಸೆತ) ಮತ್ತು ಯುವರಾಜ್ 4 ರನ್ (2ಎಸೆತ ) ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
18ನೆ ಓವರ್‌ನಲ್ಲಿ ಯುವರಾಜ್ ಮತ್ತು ಧೋನಿ ಜೊತೆಯಾಟದಲ್ಲಿ 12 ರನ್ ಜಮೆ ಮಾಡಿದರು. ಫ್ಲಿಂಟಾಪ್ ಅವರ ಕೊನೆಯ ಎರಡು ಎಸೆತಗಳಲ್ಲಿ ಚೆಂಡನ್ನು ಯುವರಾಜ್ ಸತತ ಬೌಂಡರಿ ಗೆರೆ ದಾಟಿಸಿದ್ದರು. ಭಾರತದ ಸ್ಕೋರ್ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 171ಕ್ಕೆ ಏರಿತು. ಯುವರಾಜ್ ತನ್ನ ವೈಯಕ್ತಿಕ ಸ್ಕೋರ್‌ನ್ನು 14ಕ್ಕೆ ಮತ್ತು ಧೋನಿ7ಕ್ಕೆ ಏರಿಸಿದರು. 19ನೆ ಓವರ್ ಎಸೆಯಲು ಹೊರಟ ಸ್ಟುವರ್ಟ್ ಬ್ರಾಡ್ ಅವರು ಯುವರಾಜ್ ಸಿಂಗ್‌ಗೆ ಪೆವಿಲಿಯನ್ ಹಾದಿ ತೋರಿಸುವ ಕನಸು ಕಂಡಿದ್ದರು. ಆದರೆ ಯುವರಾಜ್ ಆರ್ಭಟಿಸಿದರು. ನೋಡ ನೋಡುತ್ತಿದಂತೆ ಆ ಓವರ್‌ನ ಮೊದಲ ಎಸೆತದಲ್ಲಿ ಯುವರಾಜ್ ಸಿಕ್ಸರ್ ಎತ್ತಿದರು. ಬಳಿಕ ಐದು ಎಸೆತಗಳಲ್ಲೂ ಯುವರಾಜ್ ಸಿಂಗ್ ಸಿಕ್ಸರ್ ಬಾರಿಸುವ ಮೂಲಕ ಇತಿಹಾಸ ಬರೆದರು. ಕೇವಲ 6 ಎಸೆತಗಳಲ್ಲಿ 36 ರನ್ ಕಬಳಿಸಿದ ಯುವರಾಜ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಒಂದೇ ಓವರ್‌ನಲ್ಲಿ 36 ರನ್ ಸೇರಿದಂತೆ 4 ಓವರ್‌ಗಳಲ್ಲಿ 60 ರನ್ ಬಿಟ್ಟುಕೊಟ್ಟ ಬ್ರಾಡ್ ಆಂಗ್ಲರ ಪಾಲಿಗೆ ವಿಲನ್ ಆಗಿ ಕಾಣಿಸಿಕೊಂಡರು. ಯುವರಾಜ್ ಸಿಂಗ್ ಹೀರೋ ಆಗಿ ಮೆರೆದರು. ಆ್ಯಂಡ್ರೊ ಫ್ಲಿಂಟಾಪ್ ಅವರ ಅಂತಿಮ ಓವರ್‌ನಲ್ಲಿ ಯುವರಾಜ್ 3 ಎಸೆತಗಳಲ್ಲಿ 6 ರನ್(1 ಸಿಕ್ಸರ್) ಕಬಳಿಸಿದರು. 5ನೆ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ದರು. ಆದರೆ ಚೆಂಡು ಲಾಂಗ್‌ಆನ್‌ನಲ್ಲಿ ಕಾಲಿಂಗ್‌ವುಡ್ ಕೈ ಸೇರುವುದರೊಂದಿಗೆ ಯುವರಾಜ್ ಸಿಂಗ್ ಔಟಾದರು. ಯುವರಾಜ್ ಕೇವಲ 14 ನಿಮಿಷಗಳಲ್ಲಿ ಅರ್ಧಶತಕ ದಾಖಲಿಸಿ ತನ್ನ ಹೆಸರಲ್ಲಿ ಹೊಸ ದಾಖಲೆ ಬರೆದರು. ಯುವರಾಜ್ ಔಟಾಗಿದ್ದರೂ ಅಷ್ಟು ಹೊತ್ತಿಗೆ ಅವರ ಸ್ಕೋರ್ 58ಕ್ಕೆ ಮತ್ತು ಭಾರತದ ಸ್ಕೋರ್ 216ಕ್ಕೆ ತಲುಪಿತ್ತು. ಅಂತಿಮ ಎಸೆತದಲ್ಲಿ ಧೋನಿ ಅವರು ಇರ್ಫಾನ್ ಪಠಾಣ್ ಜೊತೆ 2 ರನ್ ಕಬಳಿಸುವುದರೊಂದಿಗೆ ಭಾರತದ ಸ್ಕೋರ್ 218ಕ್ಕೆ ತಲುಪಿತ್ತು. ಧೋನಿ 22 ನಿಮಿಷಗಳ ಬ್ಯಾಟಿಂಗ್‌ನಲ್ಲಿ 8 ಎಸೆತಗಳಲ್ಲಿ 10 ರನ್ ಗಳಿಸಿ ಔಟಾಗದೆ ಉಳಿದರು.