ಶಾಲೆಯ 3ನೇ ಮಹಡಿಯಿಂದ ಬಿದ್ದು ಬಾಲಕಿ ಮೃತ್ಯು: ಕೊಲೆ ಶಂಕೆ

Update: 2017-09-19 16:11 GMT

ಹೊಸದಿಲ್ಲಿ, ಸೆ. 19: ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯ ಖಾಸಗಿ ಶಾಲೆಯ ಆವರಣದೊಳಗೆ ಓರ್ವ ಬಾಲಕಿ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆ ಅನಂತರ ಮೃತಪಟ್ಟಿದ್ದಾಳೆ.

  ಗುರುಗ್ರಾಮ್‌ನ ಶಾಲೆಯಲ್ಲಿ ಬಾಲಕನೋರ್ವನನ್ನು ಹತ್ಯೆಗೈದ ಘಟನೆಯ ನೆನಪು ಮರೆಯಾಗುತ್ತಿರುವಾಗಲೇ ಈ ಘಟನೆ ಸಂಭವಿಸಿದೆ. ಇಲ್ಲಿನ ಮಾಡರ್ನ್ ಮೊಂಟೆಸ್ಸರಿ ಶಾಲೆಯ ಆವರಣದಲ್ಲಿ ಬಾಲಕಿ ನೀತು ಚೌಹಾನ್ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದ ಮೃತಪಟ್ಟಿದ್ದಾಳೆ.

ನೀತುವಿನ ತರಗತಿ ಕೊಠಡಿ ಮೊದಲನೆ ಮಹಡಿಯಲ್ಲಿದೆ. ಆಕೆ ಮೂರನೇ ಮಹಡಿಯಲ್ಲಿದ್ದ ಶೌಚಾಲಯಕ್ಕೆ ಹೋಗಿದ್ದಳು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಶಾಲೆಯ ಕಟ್ಟಡದ ಮೂರನೇ ಮಹಡಿಯಿಂದ ನೀತು ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧೀಕ್ಷಕ ರಾಜೀವ್ ಮಲ್ಹೋತ್ರ ಗಂಭೀರ ಗಾಯಗೊಂಡಿದ್ದ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯಲಾಯಿತು. ಅಲ್ಲಿಂದ ಗೋರಖ್‌ಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು. ಆಕೆ ಅಲ್ಲಿ ಮೃತಪಟ್ಟಳು ಎಂದಿದ್ದಾರೆ.

ಅನಾಮಿಕ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಬಾಲಕಿಯ ಹೆತ್ತವರು, ಪುತ್ರಿಯನ್ನು ಮೂರನೇ ಮಹಡಿಯಿಂದ ಎಸೆಯಲಾಗಿದೆ ಎಂದು ಆರೋಪಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಮಲ್ಹೊತ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News