ವೇಷದಿಂದ ಸಂಗ್ರಹಿಸಿದ ಹಣ ಚಿಕಿತ್ಸೆಗಾಗಿ ಹಸ್ತಾಂತರ
ಉಡುಪಿ, ಸೆ.19: ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಚಿಟ್ಪಾಡಿ ಕಸ್ತೂರ್ಬಾನಗರದ ಶ್ರೀಭಗವತಿ ನಾಸಿಕ್ ಕಲಾ ತಂಡದ ಸದಸ್ಯರು ವಿಶೇಷ ವೇಷದೊಂದಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ 2.5 ಲಕ್ಷ ರೂ. ಹಣವನ್ನು ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ರಕ್ತಹೀನತೆ ಕಾಯಿಲೆಯಿಂದ ಬಳಲುತ್ತಿರುವ 12ವರ್ಷದ ಶ್ರೇಷ್ಠಳ ಚಿಕಿತ್ಸೆಗಾಗಿ ಒಂದು ಲಕ್ಷ ರೂ. ಮತ್ತು ಉಳಿದ ಹಣವನ್ನು ಏಳು ಅನಾರೋಗ್ಯ ಪೀಡಿತರಿಗೆ ಸಮಾನವಾಗಿ ಹಂಚಲಾಯಿತು. ಶಿರೂರು ಮಠಾಧೀಶ ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮೀಜಿ ಈ ಹಣವನ್ನು ರೋಗಿಗಳಿಗೆ ಹಸ್ತಾಂತರಿಸಿದರು. ವೇಷಧಾರಿಗಳಾದ ತಂಡದ ಸದಸ್ಯರಾದ ಲಿಖಿತ್, ಸಂತೋಷ್, ನಿತೀಶ್, ಮನೋಹರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ನಗರಸಭಾ ಸದಸ್ಯರಾದ ಶಾಂತಾರಾಮ್ ಸಾಲ್ವಂಕಾರ್, ರಮೇಶ್ ಕಾಂಚನ್, ಪ್ರಸಾದ್ ಸಾಲಯಾನ್, ಲಕ್ಷ್ಮಿಚಂದ್ರಶೇಖರ್, ಭಾಸ್ಕರ್ ಶೆಟ್ಟಿ, ಶ್ರೀನಿವಾಸ್ ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ಬ್ರಹ್ಮಗಿರಿಯ ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪ ರೇಟಿವ್ ಸೊಸೈಟಿಯ ಶ್ರೀಧರ್ ದೇವಾಡಿಗ ವಹಿಸಿದ್ದರು. ತಂಡದ ಅಧ್ಯಕ್ಷ ಪ್ರಣಾಮ್ ಕುಮಾರ್, ಉಪಾಧ್ಯಕ್ಷ ಉಮೇಶ್, ಕೋಶಾಧಿಮಕಾರಿ ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.