ಪುತ್ತೂರಿನಲ್ಲಿ ಪ್ರಚೋದನಕಾರಿ ಭಾಷಣ: ಮುಸ್ಲಿಂ ಒಕ್ಕೂಟದಿಂದ ಎಸ್ಪಿಗೆ ಮನವಿ
ಮಂಗಳೂರು, ಸೆ. 19: ಇತ್ತೀಚೆಗೆ ಪುತ್ತೂರಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಗುರಿ ಮಾಡಿ ಪ್ರಚೋದನಕಾರಿ ಮತ್ತು ಉದ್ರೇಕಕಾರಿ ಭಾಷಣ ಮಾಡಿ ಪುತ್ತೂರನ್ನು ಹಳೇ ಸುರತ್ಕಲ್ ಮಾಡುತ್ತೇವೆ ಎಂಬುದಾಗಿ ಹೇಳಿಕೆ ನೀಡಿರುವ ಜಗದೀಶ್ ಕಾರಂತ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟವು ದ.ಕ. ಜಿಲ್ಲಾ ವರಿಷ್ಠಾದಿಕಾರಿ ಸುಧೀರ್ ಕುಮಾರ್ ರೆಡ್ಡಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಅಲ್ಲದೆ ನಿಯೋಗವು ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೂ ಮನವಿ ಸಲ್ಲಿಸಿ ಆಗ್ರಹಿಸಿದೆ. ಪುತ್ತೂರು ಮತ್ತು ದ.ಕ. ಜಿಲ್ಲೆಯಾದ್ಯಂತ ಮತೀಯ ಉದ್ವಿಗ್ನತೆ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಭಾಷಣವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬಗ್ಗೆ ಒಕ್ಕೂಟ ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ನೇತೃತ್ವದ ನಿಯೋಗದಲ್ಲಿ ಹಮೀದ್ ಕುದ್ರೋಳಿ, ಸಿ.ಎಂ.ಮುಸ್ತಫಾ, ಮುಹಮ್ಮದ್ ಹನೀಫ್ ಯು., ಅಶ್ರಫ್ ಕಿನಾರ, ಮೊದಿನ್ ಮೋನು,ಅಹ್ಮದ್ ಬಾವ ಬಜಾಲ್ ಮತ್ತು ನೌಶಾದ್ ಕುದ್ರೋಳಿ ಉಪಸ್ಥಿತರಿದ್ದರು.