“ಮ್ಯಾನ್ಮಾರ್ ಸೇನೆ ನಮ್ಮ ಗಂಡಂದಿರನ್ನು ಕಣ್ಣೆದುರಲ್ಲೇ ಕೊಂದಿತ್ತು”

Update: 2017-09-19 16:44 GMT

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಸೆ. 19: ಮ್ಯಾನ್ಮಾರ್‌ನಲ್ಲಿ ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ 4 ಲಕ್ಷಕ್ಕೂ ಅಧಿಕ ರೊಹಿಂಗ್ಯ ಮುಸ್ಲಿಮರು ಈಗಾಗಲೇ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದಾರೆ. ಈ ಪೈಕಿ 500ಕ್ಕೂ ಹೆಚ್ಚು ರೊಹಿಂಗ್ಯಾ ಹಿಂದೂಗಳೂ ಇದ್ದಾರೆ ಎಂದು ‘ಢಾಕಾ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.

ರಖೈನ್ ರಾಜ್ಯದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಸೇನೆಯು ಹಿಂದೂ ಪುರುಷರನ್ನೂ ಕೊಂದಿದೆ ಎನ್ನಲಾಗಿದೆ. ಆದರೆ, ಎಷ್ಟು ಮಂದಿ ಹತರಾಗಿದ್ದಾರೆ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಾಗಿದೆ.

“ಸೇನೆಯು ನಮ್ಮ ಗಂಡಂದಿರನ್ನು ಕಣ್ಣೆದುರಿನಲ್ಲೇ ಕೊಂದಿದೆ” ಎಂದು ಕನಿಷ್ಠ 8 ಹಿಂದೂ ಮಹಿಳೆಯರು ಹೇಳಿದ್ದಾರೆ. ಈ ಮಹಿಳೆಯರು ಕಳೆದ ಹಲವು ವಾರಗಳಲ್ಲಿ ರಖೈನ್‌ನಿಂದ ಬಾಂಗ್ಲಾದೇಶಕ್ಕೆ ತಪ್ಪಿಸಿಕೊಂಡು ಬಂದಿದ್ದಾರೆ.

ಸೇನೆಯು ತನ್ನ ಗಂಡನನ್ನು ಕೊಂದ ಬಳಿಕ, ಬಾಂಗ್ಲಾದೇಶಕ್ಕೆ ಪಲಾಯನಗೈಯಲು ತಾನು ನಿರ್ಧರಿಸಿದೆ ಎಂದು 25 ವರ್ಷದ ಪ್ರಮೀಳಾ ಶೀಲ್ ಹೇಳುತ್ತಾರೆ.

18 ವರ್ಷದ ಅನಿಕಾ ಧಾರ್ ಕೂಡ ಪ್ರಮೀಳಾರಂತೆ ಬಾಂಗ್ಲಾದೇಶಕ್ಕೆ ತಪ್ಪಿಸಿಕೊಂಡು ಬಂದವರು. ಅವರು ಕುಟುಪಲಾಂಗ್‌ನಲ್ಲಿರುವ ಹಿಂದೂ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. ಶಿಬಿರದಲ್ಲಿ ಇತರ 77 ಕುಟುಂಬಗಳಿವೆ.

ತನ್ನ ಗಂಡ ಮಿಲೊನ್ ಮಂಗ್ಡಾದ ಫಕೀರಾ ಬಝಾರ್‌ನಲ್ಲಿ ಕ್ಷೌರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಗರ್ಭಿಣಿ ಅನಿಕಾ ಹೇಳುತ್ತಾರೆ.

‘‘ಸೈನಿಕರು ನನ್ನ ಗಂಡನನ್ನು ಆಗಸ್ಟ್ 27ರಂದು ಗುಂಡು ಹಾರಿಸಿ ಕೊಂದರು. ನಾನು ಮುಸ್ಲಿಮರೊಂದಿಗೆ ಸೇರಿ ಇಲ್ಲಿಗೆ ತಪ್ಪಿಸಿಕೊಂಡು ಬಂದೆ’’ ಎಂದು ಅವರು ‘ಢಾಕ ಟ್ರಿಬ್ಯೂನ್’ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News