ಕೆಲ ರೊಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಪಡೆಯಲು ಸಿದ್ಧ: ಸೂಕಿ

Update: 2017-09-19 17:04 GMT

ನೇಪಿಡಾವ್ (ಮ್ಯಾನ್ಮಾರ್), ಸೆ. 19: ಮ್ಯಾನ್ಮಾರ್ ಸೇನೆಯಿಂದ ದಬ್ಬಾಳಿಕೆಗೆ ಒಳಗಾಗಿರುವ ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ವಿಷಯದಲ್ಲಿ ಆ ದೇಶದ ನಾಯಕಿ ಆಂಗ್ ಸಾನ್ ಸೂ ಕಿ ಮೊದಲ ಬಾರಿಗೆ ಮಂಗಳವಾರ ಮೌನ ಮುರಿದಿದ್ದಾರೆ.

ಬಿಕ್ಕಟ್ಟಿನ ಜಾಗತಿಕ ಪರಿಶೀಲನೆಗೆ ತಾನು ಹೆದರುವುದಿಲ್ಲ ಎಂದಿದ್ದಾರೆ.ಅಂತಾರಾಷ್ಟ್ರೀಯ ಸಮುದಾಯವನ್ನು ಸಂತೈಸುವ ಧ್ವನಿಯಲ್ಲಿ ಮಾತನಾಡಿರುವ ಅವರು, ದೇಶದ ಧಾರ್ಮಿಕ ಮತ್ತು ಜನಾಂಗೀಯ ಗುಂಪುಗಳನ್ನು ಒಂದುಗೂಡಿಸಲು ಸಹಾಯ ಮಾಡುವಂತೆ ಅವರು ಹೊರಗಿನ ದೇಶಗಳನ್ನು ಒತ್ತಾಯಿಸಿದ್ದಾರೆ ಹಾಗೂ ಸೇನಾ ದಬ್ಬಾಳಿಕೆಯಿಂದ ಪಲಾಯನಗೈದಿರುವ ರೊಹಿಂಗ್ಯ ಮುಸ್ಲಿಮರ ಪೈಕಿ ಕೆಲವರು ದೇಶಕ್ಕೆ ಮರಳಲು ಅವಕಾಶ ನೀಡುವ ವ್ಯವಸ್ಥೆಯೊಂದನ್ನು ಜಾರಿಗೆ ತರುವ ಭರವಸೆಯನ್ನೂ ನೀಡಿದ್ದಾರೆ.

ಆಗಸ್ಟ್ 25ರಂದು ರಖೈನ್ ರಾಜ್ಯದಲ್ಲಿ ಸಂಘರ್ಷ ಆರಂಭಗೊಂಡ ಬಳಿಕ 4.1 ಲಕ್ಷಕ್ಕೂ ಅಧಿಕ ರೊಹಿಂಗ್ಯ ಮುಸ್ಲಿಮರು ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎನ್ನಲಾಗಿದೆ.

ಅದೇ ವೇಳೆ, ಮ್ಯಾನ್ಮಾರ್‌ನಲ್ಲಿ ಜನಾಂಗೀಯ ನಿರ್ಮೂಲನೆ ನಡೆಯುತ್ತಿದೆ ಎಂಬುದಾಗಿ ವಿಶ್ವಸಂಸ್ಥೆ ಆರೋಪಿಸಿದೆ.

ದೇಶವಿಲ್ಲದ ರೊಹಿಂಗ್ಯಾಗಳ ಪರವಾಗಿ ಸಾರ್ವಜನಿಕವಾಗಿ ಮಾತನಾಡಲು ವಿಫಲವಾಗಿರುವ ಬಗ್ಗೆ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯೂ ಆಗಿರುವ ಸೂಕಿ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.

ಆದರೆ, ಮಂಗಳವಾರ ಟಿವಿಯಲ್ಲಿ ದೇಶವನ್ನುದ್ದೇಶಿಸಿ 30 ನಿಮಿಷದ ಭಾಷಣ ಮಾಡಿದ ಸೂ ಕಿ, ತನ್ನ ಟೀಕಾಕಾರನ್ನು ಸಂತೈಸುವ ಪ್ರಯತ್ನಗಳನ್ನು ಮಾಡಿದರು.

 ಹಿಂಸೆಯಿಂದ ಸಂತ್ರಸ್ತರಾದ ‘ಎಲ್ಲಾ’ ಗುಂಪುಗಳಿಗೆ ವಿಷಾದ ವ್ಯಕ್ತಪಡಿಸಿದ ಅವರು, ‘ಪರಿಶೀಲನೆ’ ಪ್ರಕ್ರಿಯೆಯ ಬಳಿಕ ನಿರಾಶ್ರಿತರನ್ನು ‘ಯಾವುದೇ ಸಮಯದಲ್ಲಿ’ ಮರಳಿ ಪಡೆಯಲು ತನ್ನ ದೇಶ ಸಿದ್ಧವಿದೆ ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು.

ಆದರೆ, 72 ವರ್ಷದ ನಾಯಕಿಗೆ ತನ್ನ ಸೇನೆಯ ಮೇಲೆ ನಿಯಂತ್ರಣವಿಲ್ಲ ಎಂದು ಅವರ ಬೆಂಬಲಿಗರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News