ರೊಹಿಂಗ್ಯ ಮುಸ್ಲಿಮರಿಗೆ ಸ್ಪಂದಿಸುವಂತೆ ಒತ್ತಾಯಿಸಿ ಸೆ.22 ರಂದು ಡಿಸಿ ಕಚೇರಿ ಮುಂದೆ ಹಕ್ಕೊತ್ತಾಯ ಸಭೆ
ಉಳ್ಳಾಲ, ಸೆ. 19: ರೊಹಿಂಗ್ಯನ್ನರ ಮಾನವೀಯ ಹಕ್ಕುಗಳಿಗಾಗಿ ಸ್ಪಂದಿಸುವಂತೆ ಸೈಯದ್ ಮದನಿ ಸೋಶಿಯಲ್ ಫ್ರಂಟ್ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುವ ಹಕ್ಕೊತ್ತಾಯ ಸಭೆಯನ್ನು ಸೆ.22 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆಯಲಿದೆ ಎಂದು ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಹಾಗೂ ಸೈಯ್ಯದ್ ಮದನಿ ಸೋಶಿಯಲ್ ಫ್ರಂಟ್ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದ್ದಾರೆ.
ಉಳ್ಳಾಲ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಮಂಗಳವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಾಯಕ , ರೊಹಿಂಗ್ಯ ಮುಸ್ಲಿಮರ ಮೇಲೆ ಬರ್ಮಾ ಸರಕಾರದ ಮೌನ ಸಮ್ಮತಿಯೊಂದಿಗೆ ಮ್ಯಾನ್ಮರ್ ಸೈನ್ಯ ನಡೆಸುತ್ತಿರುವ ಬರ್ಬರ ಹಲ್ಲೆ, ಬೀಭತ್ಸ ಹತ್ಯೆ, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಮಾನವೀಯ ಹಕ್ಕುಗಳ ಪರವಾಗಿ ಪ್ರತಿಪಾದಿಸುತ್ತಾ ಬಂದಿರುವ ಹಿನ್ನೆಲೆ ಹೊಂದಿರುವ ಭಾರತ ಸರಕಾರ ಈ ಕುರಿತು ಇನ್ನೂ ಧ್ವನಿ ಎತ್ತದಿರುವುದು ಮನುಷ್ಯತ್ವದ ಉಲ್ಲಂಘನೆಯಾಗಿದೆ. ಇದಕ್ಕೆ ಉಳ್ಳಾಲ ದರ್ಗಾ ಸಮಿತಿ ನೇತೃತ್ವದ ಸೈಯದ್ ಮದನಿ ಸೋಷಿಯಲ್ ಫ್ರಂಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು.
ಭಾರತದ ಶಿಬಿರಗಳಲ್ಲಿ ಹಲವು ವರ್ಷಗಳಿಂದ ನಿರಾಶ್ರಿತರಾಗಿ ಬದುಕುತ್ತಿರುವ ರೊಹಿಂಗ್ಯರನ್ನು ಬರ್ಮಾ ದೇಶಕ್ಕೆ ಮರಳಿಸುವ ನಿರ್ಧಾರಕ್ಕೆ ಬಂದಿರುವುದು ಅಮಾನವೀಯ. ಇದು ಮಾನವ ಹಕ್ಕುಗಳ ಮೇಲೆ ನಡೆಸುವ ಅಪರಾಧವಾಗಿದೆ. ಮನುಷ್ಯತ್ವದಲ್ಲಿ ವಿಶ್ವಾಸ ಇಟ್ಟಿರುವ ಎಲ್ಲಾ ಜಾತಿ, ಧರ್ಮದವರು ಕೇಂದ್ರ ಸರಕಾರ ತನ್ನ ನಿಲುವನ್ನು ತಿದ್ದಿ ಕೊಳ್ಳಲು ಆಗ್ರಸುವ ಅಗತ್ಯವಿದೆ. ಆದ್ದರಿಂದ ರೊಹಿಂಗ್ಯನ್ನರ ಪರವಾಗಿ ಧ್ವನಿ ಎತ್ತಿ, ವಿಶ್ವ ಸಂಸ್ಥೆಗೂ ಚುರುಕು ಮುಟ್ಟಿಸಿ, ರೊಹಿಂಗ್ಯನ್ನರ ನಾಗರಿಕ ಹಕ್ಕುಗಳ ರಕ್ಷಣೆಯಲ್ಲಿ ಭಾರತ ಕೈಗೋಡಿಸಬೇಕಿದೆ. ಈ ನಿಟ್ಟಿನಲ್ಲಿ ಸೆ. 22 ರಂದು ನಡೆಯುವ ಹಕ್ಕೊತ್ತಾಯ ಮತ್ತು ಖಂಡನಾ ಸಭೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಸೈಯ್ಯದ್ ಮದನಿ ಸೋಶಿಯಲ್ ಫ್ರಂಟ್‌ನ ಕಾರ್ಯಾಧ್ಯಕ್ಷ ತ್ವಾಹಾ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಎಮ್. ಕೆ.ಜುನೈದ್ ಮಕ್ದೂಂ, ಫಾರುಕ್ ಉಳ್ಳಾಲ, ಅಯ್ಯೂಬ್ ಮಂಚಿಲ, ಸಂಚಾಲಕರಾದ ಉಸ್ಮಾನ್ ಕಲ್ಲಾಪು, ಇಸ್ಮಾಯೀಲ್ ಪೊಡಿಮೋನು, ಯು.ಕೆ.ಸದಖತುಲ್ಲ, ಖಾಲಿದ್ ಯೂಸುಫ್, ಯು.ಎ. ಇಬ್ರಾಹೀಂ ಉಪಸ್ಥಿತರಿದ್ದರು.