×
Ad

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮುಖ್ಯಶಿಕ್ಷಕನ ಬಂಧನ

Update: 2017-09-19 22:56 IST

ಶಂಕರನಾರಾಯಣ, ಸೆ.19: ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕನನ್ನು ಶಂಕರನಾರಾಯಣ ಪೊಲೀಸರು ಪೋಕ್ಸೊ ಕಾಯಿದೆಯಡಿ ಇಂದು ಬಂಧಿಸಿದ್ದಾರೆ.

ಸಿದ್ಧಾಪುರ ಐರ್‌ಬೈಲು ನಿವಾಸಿ ಶ್ರೀನಿವಾಸ ಜೋಶಿ (59) ಬಂಧಿತ ಆರೋಪಿ. ಕಳೆದ ನಾಲ್ಕೈದು ವರ್ಷಗಳಿಂದ ಮುಖ್ಯ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ ಜೋಶಿ ಕಳೆದ ಕೆಲವು ಸಮಯದಿಂದ ಶಾಲೆಯ 8-10 ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರೆನ್ನಾಗಿದೆ. ಈ ವಿಚಾರವನ್ನು ಮಕ್ಕಳು ತಮ್ಮ ಪೋಷಕರಲ್ಲಿ ತಿಳಿಸಿದ್ದರು. ಹಾಗೆ ಪೋಷಕರು ಈ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.

ಸೆ.16ರಂದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್.ಪ್ರಕಾಶ್ ಶಾಲೆಗೆ ತೆರಳಿ ಪರಿಶೀಲನೆ ನಡೆಸಿದಾಗ ಆರೋಪಿ ಮುಖ್ಯಶಿಕ್ಷಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅದರಂತೆ ಸೆ.18ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪೋಷಕರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ ಜೋಶಿ ವಿರುದ್ಧ ದೂರು ನೀಡಿದರು.

ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮುಖ್ಯ ಶಿಕ್ಷಕನನ್ನು ಇಂದು ಬಂಧಿಸಿ, ಸಂಜೆ ವೇಳೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಹಿಂದೆ ಕುಂದಾಪುರ ವಲಯ ವ್ಯಾಪ್ತಿಯ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ಶ್ರೀನಿವಾಸ ಜೋಶಿ ಅಲ್ಲಿಯೂ ಮಕ್ಕಳಿಗೆ ಇದೇ ರೀತಿ ಲೈಂಗಿಕ ಕಿರುಕುಳ ನೀಡಿದ್ದರು. ಇಲಾಖೆ ಇವರ ವಿರುದ್ಧ ಶಿಸ್ತುಕ್ರಮ ಜರಗಿಸಿ, ಅಮಾನತುಗೊಳಿಸಿ ಅಲ್ಲಿಂದ ಈ ಶಾಲೆಗೆ ವರ್ಗಾವಣೆ ಮಾಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News